

ಎಚ್.ಡಿ.ಕೋಟೆ: ತೋಟದ ಮನೆಯಲ್ಲಿ ಕಟ್ಟಿದ್ದ ಹಸು, ಕರು ಹಾಗೂ ಟಗರುಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿ, ಬೇರೆ ಪ್ರಕರಣದಲ್ಲಿ ಕಳವು ಮಾಡಿದ್ದ ಐದು ಹಸುಗಳನ್ನು ವಶಕ್ಕೆ ಪಡೆದಿದ್ದಾರೆ.
ಕೇರಳ ಮೂಲದ ಇಬ್ಬರು ಹಾಗೂ ಪೊನ್ನಂಪೇಟೆ ಮೂಲದ ಒಬ್ಬ ಬಂಧಿತ ಆರೋಪಿಯಾಗಿದ್ದಾರೆ.
ಜೂ.16ರಂದು ರಾತ್ರಿ ತಾಲೂಕಿನ ತಾಲೂಕಿನ ರಾಜೇಗೌಡನಹುಂಡಿ ಗ್ರಾಮದ ಲೇ.ಶೇಖರ್ ಎಂಬುವರ ಪತ್ನಿ ಕುಮಾರಿ ಎಂಬುವರ ತೋಟದ ಮನೆಯಲ್ಲಿ ಕಟ್ಟಿಹಾಕಿದ್ದ 2 ಹಸು, 1 ಕರು ಹಾಗೂ 2 ಟಗರುಗಳನ್ನು ಕಳವು ಮಾಡಿದ್ದರು.
ಈ ಸಂಬಂಧ ಕುಮಾರಿ ಅವರು ಪಟ್ಟಣ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳ ಪತ್ತೆಗೆ ನಾಲ್ವರು ಪೊಲೀಸರ ತಂಡ ರಚಿಸಿದ್ದರು.
ಜು.28ರಂದು ಕೇರಳ ಮೂಲದ ಇಬ್ಬರು ಹಾಗೂ ಪೊನ್ನಂಪೇಟೆ ಮೂಲದ ಒಬ್ಬ ಆರೋಪಿಯನ್ನು ಹುಣಸೂರು ಬಳಿ ಪತ್ತೆ ಮಾಡಿ ಬಂಧಿಸಿದರು.
ಬೇರೆಡೆ ಕಳವು ಮಾಡಿದ್ದ 5 ಹಸು ಹಾಗೂ 43,700 ರೂ. ನಗದನ್ನು ವಶಕ್ಕೆ ಪಡೆದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.