

ರಾಜರಾಜೇಶ್ವರಿನಗರದ ನಿವಾಸಿಗಳು 15 ವರ್ಷಗಳಿಂದಲೂ ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿದ್ದು, ಕೂಡಲೇ ಸೂಕ್ತ ಪರಿಹಾರ ನೀಡದಿದ್ದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ರಾಜರಾಜೇಶ್ವರಿನಗರ ನಾಗರಿಕ ವೇದಿಕೆ ಎಚ್ಚರಿಸಿದೆ.
ಬಿಇಎಂಎಲ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದವರು ಸುಮಾರು 105 ಎಕರೆ ಪ್ರದೇಶದಲ್ಲಿ ಈ ಬಡಾವಣೆಯನ್ನು 1992ರಲ್ಲಿ ಅಭಿವೃದ್ಧಿಪಡಿಸಿದ್ದಾರೆ. 2015ರವರೆಗೂ ಇಲ್ಲಿನ ನಿವಾಸಿಗಳಿಗೆ ನಕ್ಷೆ ಅನುಮೋದನೆ, ಸಿ.ಆರ್. ನೀಡುವುದು ಕಂದಾಯ ನಿಗದಿಯನ್ನು ಮುಡಾ ಮಾಡಿರುತ್ತದೆ. ನಂತರ, ಸಂಘದೊಂದಿಗೆ ಜಮೀನು ವ್ಯಾಜ್ಯವಿದೆ ಎಂದು ಈ ಸೌಲಭ್ಯ ನೀಡುವುದನ್ನು ನಿಲ್ಲಿಸಿದೆ. ಮೂಲಸೌಕರ್ಯವನ್ನೂ ಒದಗಿಸುತ್ತಿಲ್ಲ. ಅನುಮತಿ ಇದ್ದವರನ್ನು ಕಡೆಗಣಿಸಿದೆ ಎಂದು ವೇದಿಕೆ ಅಧ್ಯಕ್ಷ ಎನ್.ಕೆ.ಗೋಪಾಲಯ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಇತ್ತೀಚೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದಾಗ ಅಂತಹ ಯಾವುದೇ ವ್ಯಾಜ್ಯವಿಲ್ಲವೆಂದು ತಿಳಿದುಬಂದಿದೆ. ಹಾಗಿದ್ದೂ ಮುಡಾ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಕೂಡಲೇ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಗೃಹ ನಿರ್ಮಾಣ ಸಂಘವೂ ಸಮಸ್ಯೆ ಬಗೆಹರಿಸಲು ಸಹಕರಿಸಬೇಕು, ಇಲ್ಲದಿದ್ದರೆ ಅವರ ಕಚೇರಿ ಎದುರೂ ಪ್ರತಿಭಟನೆ ಮಾಡಲಿದ್ದೇವೆ ಎಂದರು.
ವೇದಿಕೆ ಉಪಾಧ್ಯಕ್ಷ ಮೋಹನಕೃಷ್ಣ, ಸಹ ಕಾರ್ಯದರ್ಶಿ ಎ.ವಿ.ಶಶಿಧರ್, ಖಜಾಂಚಿ ಕೆ.ಶ್ರೀನಿವಾಸನ್ ಇದ್ದರು.