

ಆಲೂರು : ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ನೀಡಬೇಕಾದುದು ಜನಪ್ರತಿನಿಧಿ ಮತ್ತು ಸರ್ಕಾರದ ಕರ್ತವ್ಯ. ನಾನು ಶಾಸಕನಾದ ನಂತರ ಸರ್ಕಾರದಿಂದ ಬರುವ ಅನುದಾನವನ್ನು ಜನಸಾಮಾನ್ಯರಿಗೆ ಒದಗಿಸಲು ಬದ್ಧನಾಗಿದ್ದೇನೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ಸುಮಾರು 50 ಲಕ್ಷ ರೂ.ಗಳ ವೆಚ್ಚದ ರಸ್ತೆ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನಾನು ಚುನಾವಣೆ ಪೂರ್ವದಲ್ಲಿ ಮತಕ್ಕಾಗಿ ಗ್ರಾಮಕ್ಕೆ ಬಂದ ಸಂದರ್ಭದಲ್ಲಿ ರಸ್ತೆ ಸೇರಿದಂತೆ ಹಲವು ಮೂಲಸೌಕರ್ಯಗಳ ಬೇಡಿಕೆ ಸಲ್ಲಿಸಿದ್ದೀರಿ. ಅದರೆ ನಿಮಗೆ ತಿಳಿದಿರುವಂತೆ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಹಾಗಾಗಿ ಸ್ವಲ್ಪ ತಡವಾಗಿದೆ. ಕಳೆದ ವಾರ ಸುರಿದ ಮಳೆಯಲ್ಲಿ ರಸ್ತೆ ಸಂಪೂರ್ಣ ಕೆಸರುಮಯವಾಗಿತ್ತು. ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಈ ಸುದ್ದಿ ಹರಿದಾಡಿದ್ದು ನಾನು ಕೂಡ ನೋಡಿದ್ದೇನೆ. ಸರ್ಕಾರದಿಂದ ಬಂದ ಸಣ್ಣಪುಟ್ಟ ಅನುದಾನದಲ್ಲಿ ಕ್ಷೇತ್ರದ ಹೆಚ್ಚು ಅವಶ್ಯಕವಾಗಿರುವ ರಸ್ತೆಗಳ ಪಟ್ಟಿ ಮಾಡಿ ಯಾವುದೇ ತಾರತಮ್ಯ ಮಾಡದೇ ಅಭಿವೃದ್ಧಿಪಡಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಎಸ್‌ಇಪಿ,ಟಿಎಸ್‌ಪಿ ಅನುದಾನದಲ್ಲಿ ಗ್ರಾಮದ ಮುಖ್ಯ ರಸ್ತೆ ಸುಮಾರು 750 ಮೀ. ಆಗಲಿದೆ. ಉಳಿದ ರಸ್ತೆ ಕಾಮಗಾರಿಯನ್ನು ಎತ್ತಿನಹೊಳೆ ಯೋಜನೆಯಲ್ಲಿ ಕೈಗೆತ್ತಿ ಕೊಂಡು ಮಗ್ಗೆ-ಬೈರಾಪುರ ರಸ್ತೆಯವರೆಗೆ ಸಂಪೂರ್ಣವಾಗಿ ಮುಗಿಯಲಿದೆ ಎಂದರು.
ಮೂರು ತಿಂಗಳ ಅವಧಿಯಲ್ಲಿ ಹಲವು ಗ್ರಾಮಗಳ ಹಲವು ರಸ್ತೆಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುವುದು. ಮಾದರಿ ಕ್ಷೇತ್ರ ಮಾಡಬೇಕು ಎನ್ನುವ ಬಯಕೆ ಹೊಂದಿದ್ದೇನೆ. ಆದರೆ ನನ್ನ ವೇಗಕ್ಕೆ ಅನುಗುಣವಾಗಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಮಂತ್ರಿಗಳ ಮನೆ ಬಾಗಿಲಿಗೆ ಹೋಗಿ ಅನುದಾನ ಬಿಡುಗಡೆ ಮಾಡುವಂತೆ ಕೇಳುತ್ತೇನೆ ಎಂದರು.
ತಾಲೂಕು ಪಂಚಾಯಿತಿ ಇಒ ಸುಬ್ರಮಣ್ಯ ಶರ್ಮಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು, ಬಿಜೆಪಿ ಕಾರ್ಯದರ್ಶಿ ಕೃಷ್ಣ ಅಬ್ಬನ, ಗ್ರಾಮ ಪಂಚಾಯಿತಿ ಸದಸ್ಯ ನಂಜುಂಡಪ್ಪ, ಅಪ್ಪಣಿ,ಗಣೇಶ್ ಧರ್ಮಪುರಿ, ಮಂಜೇಗೌಡ ಹೊನಹಳ್ಳಿಪುರ, ನಂದೀಶ್ ಹೊಸೂರು ಇತರರು ಉಪಸ್ಥಿತರಿದ್ದರು.