

ಹನಗೋಡು: ಗಿರಿಜನರ ಏಳಿಗೆಗಾಗಿ ಸರ್ಕಾರದೊಂದಿಗೆ ವಿವಿಧ ಸಂಘ-ಸಂಸ್ಥೆಗಳು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ಡಬ್ಲೂೃಸಿಎಸ್ ಇಂಡಿಯಾ, ವನವಾಸಿ ಕಲ್ಯಾಣ, ಜೇನು ಕುರುಬ ಅಭಿವೃದ್ಧಿ ಸಂಘದಿಂದ ಹೆಬ್ಬಾಳ ಪುನರ್ವಸತಿ ಕೇಂದ್ರದಲ್ಲಿ ಆದಿವಾಸಿಗಳಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಸಿ ವಿತರಣೆ ಹಾಗೂ ವಾಹನ ಚಾಲನಾ ಪರವಾನಗಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಿರಿಜನರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರೊಂದಿಗೆ ಅರಣ್ಯ ಜೀವನವನ್ನು ಬಿಟ್ಟು ನಾಗರಿಕ ಬದುಕಿಗೆ ಹೊಂದಿಕೊಂಡು ಸ್ವಾವಲಂಬಿಗಳಾಗಬೇಕು. ಅರಣ್ಯ ಇಲಾಖೆಯು ಅರಣ್ಯದಿಂದ ಪುನರ್ವಸತಿಗೊಂಡವರಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಬೇಕು ಎಂದು ಸೂಚಿಸಿದರು.
ಮೂರು ಲಕ್ಷ ರೂ. ಸಸಿ ವಿತರಣೆ: ಡಬ್ಲೂೃಸಿಎಸ್ ಇಂಡಿಯಾ ಸಂಸ್ಥೆಯಿಂದ ನೀರಾವರಿ ಸೌಲಭ್ಯ ಹೊಂದಿರುವ ಹೆಬ್ಬಳ ಪುನರ್ವಸತಿ ಕೇಂದ್ರದ 33 ಫಲಾನುಭವಿಗಳಿಗೆ ತೆಂಗು, ಅಡಿಕೆ, ಸಿಲ್ವರ್ ಸೇರಿದಂತೆ ಮೂರು ಲಕ್ಷ ರೂ. ವೆಚ್ಚದ ತೋಟಗಾರಿಕಾ ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು.
ಇದೇ ವೇಳೆ ಅಪೌಷ್ಠಿಕತೆಯಿಂದ ಬಳಲುತ್ತಿರುವ 60 ವರ್ಷದ ಮೇಲ್ಪಟ್ಟವರಿಗೆ ಆದಿವಾಸಿಗಳೇ ಸ್ವಸಹಾಯ ಸಂಘದಿಂದ ತಯಾರಿಸಿರುವ ಪೌಷ್ಠಿಕ ಆಹಾರದ ಪ್ಯಾಕೆಟ್ ಹಾಗೂ 22 ಮಂದಿ ಆದಿವಾಸಿ ಯುವಕರಿಗೆ ಡಿಎಲ್ ವಿತರಿಸಲಾಯಿತು.
ಅರಣ್ಯ ಇಲಾಖೆ ಎಸಿಎಫ್ ದಯಾನಂದ್ ವಲಯ ಅರಣ್ಯಾಧಿಕಾರಿ ರತನ್‌ಕುಮಾರ್, ಕಡೆಮನುಗನಹಳ್ಳಿ ಗ್ರಾಪಂ ಅಧ್ಯಕ್ಷೆ ರಾಧಾ, ಉಪಾಧ್ಯಕ್ಷ ಕಾಳೇಗೌಡ, ಜೇನು ಕುರುಬ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಜೆ.ಟಿ.ರಾಜಪ್ಪ, ಹೆಬ್ಬಾಳ ಪುನರ್ವಸತಿ ಕೇಂದ್ರದ ಅಧ್ಯಕ್ಷ ಚಂದ್ರು, ಆದಿವಾಸಿ ಮುಖಂಡರಾದ ಶೆಟ್ಟಳ್ಳಿ ಶಂಕರ್, ಶಿವಣ್ಣ, ಮುತ್ತಣ್ಣ, ವನವಾಸಿ ಕಲ್ಯಾಣದ ಜಿಲ್ಲಾ ಸಮಿತಿ ಅಧ್ಯಕ್ಷ ವಿಠ್ಠಲ, ಗ್ರಾಪಂ ಸದಸ್ಯರಾದ ಗೌರಮ್ಮ, ಗವಿಮಾಧು, ರಂಗಣ್ಣ, ಡಬ್ಲೂೃಸಿಎಸ್‌ನ ವಿನೋದ್, ಲೋಕೇಶ್, ಪ್ರಕಾಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.