

ಎಚ್.ಡಿ.ಕೋಟೆ: ತಾಲೂಕಿನ ನೇರಳೆ ಗಣೇಶನಗುಡಿ ಹಾಗೂ ಸುಣ್ಣಕಲ್ ಮುಂಟಿ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೂರು ಮೇಕೆ ಹಾಗೂ ಕರುವಿನ ಮೇಲೆ ಚಿರತೆ ದಾಳಿ ನಡೆಸಿದೆ.
ತಾಲೂಕಿನ ನೇರಳೆ ಗಣೇಶನಗುಡಿ ಗ್ರಾಮದ ನಿವಾಸಿ ವೆಂಕಟಸ್ವಾಮಿ ಅವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆ ಮೇಲೆ ಚಿರತೆ ದಾಳಿ ನಡೆಸಿದೆ. ಮೇಕೆ ಕಿರುಚಾಡಿದ ಸಂದರ್ಭದಲ್ಲಿ ವೆಂಕಟಸ್ವಾಮಿ ಗಾಬರಿಗೊಂಡು ಮನೆಯಿಂದ ಹೊರಗೆ ಬಂದು ನೋಡಿದಾಗ ಚಿರತೆ ಮೇಕೆಯನ್ನು ಕೊಂದಿದೆ. ಅದನ್ನು ನೋಡಿ ಕೂಗಿಕೊಂಡಾಗ ಅಷ್ಟರಲ್ಲಿ ಚಿರತೆ ಮೇಕೆಯನ್ನು ಬಿಟ್ಟು ಓಡಿ ಹೋಗಿದೆ.
ಮತ್ತೆ ಅದೇ ರಾತ್ರಿ ನೇರಳೆ ಗ್ರಾಮದ ನಿವಾಸಿ ಚಿಕ್ಕಯ್ಯ ಎಂಬುವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆ ಮೇಲೆ ದಾಳಿ ನಡೆಸಿ ಮೇಕೆಯನ್ನು ಕೊಂದು ನಂತರ ಸುಣ್ಣಕಲ್ ಮುಂಟಿ ಗ್ರಾಮದ ನಿವಾಸಿ ಸಿದ್ದೇಗೌಡ ಅವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೇಕೆ ಮೇಲೆ ದಾಳಿ ನಡೆಸಿದೆ. ಮತ್ತೆ ಅದೇ ಗ್ರಾಮದ ನಾಗೇಗೌಡ ಎಂಬುವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ದಾಳಿ ಮಾಡಿ ಕರುವಿನ ಅರ್ಧ ಭಾಗವನ್ನು ತಿಂದು ಬಿಟ್ಟು ಹೋಗಿದೆ.
ನೇರಳೆ ಗಣೇಶನ ಗುಡಿ ಹಾಗೂ ಸುಣ್ಣಕಲ್ ಮುಂಟಿ ಸುತ್ತಮುತ್ತಲಿನ ಚಿರತೆ ಬೀಡು ಬಿಟ್ಟಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಚಿರತೆ ಸೆರೆಗೆ ಬೋನು ಅಳವಡಿಕೆ: ಡಿಆರ್‌ಎಫ್‌ಒ ಚಂದನ್ ಮಾತನಾಡಿ, ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಗಸ್ತು ಮಾಡಲು ನೇಮಕ ಮಾಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮಹಮದ್, ನಾರಾಯಣ್, ಅವರೊಡನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆ ಸೆರೆ ಹಿಡಿಯಲು ನಾಗೇಗೌಡ ಎಂಬುವರ ಮನೆ ಬಳಿ ಶನಿವಾರ ಬೋನು ಇರಿಸಲಾಗಿದೆ ಎಂದರು.
ನೇರಳೆ ಗ್ರಾಮದ ನಿವಾಸಿಗಾಳದ ಸೋಮೇಶ್ ಹಾಗೂ ಅವರ ಸ್ನೇಹಿತ ಕುಮಾರ್ ಎಂಬುವರು ಕೆಲಸ ಮುಗಿಸಿ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಚಿರತೆ ರಸ್ತೆ ಬದಿ ಹೋಗುವುದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.