

ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ನ ಸುಳ್ಳಿಗೆ ಜನತೆ ಉತ್ತರ ಕೊಟ್ಟಿದ್ದಾರೆ ಎಂದು ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ವೇಳೆ ಸುಳ್ಳು ಪ್ರಚಾರ ಮಾಡಿದ್ದರು. ಜನತೆ ಇದಕ್ಕೆ ಯಾವುದೇ ಮನ್ನಣೆ ನೀಡಿಲ್ಲ. ವಕ್ಫ್ ಬೋರ್ಡ್‌ನದು ಸಮಸ್ಯೆಯೇ ಅಲ್ಲ. ಚುನಾವಣೆಗೋಸ್ಕರ ವಕ್ಫ್ ವಿಚಾರ ಮುನ್ನಲೆಗೆ ತಂದರು. ಎಲ್ಲಾ ಚುನಾವಣೆಗಳು ಪಕ್ಷಕ್ಕೆ ಪ್ರತಿಷ್ಠೆ ಆಗಿರುತ್ತವೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಪರಿಶ್ರಮದಿಂದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮುಡಾ ಪ್ರಕರಣದಿಂದ ಸಿಎಂ ಸಿದ್ದರಾಮಯ್ಯನವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದರು.
ನಾವು ತಪ್ಪು ಮಾಡಿದ್ದರೆ ತಾನೇ ಭಯ ಪಡುವುದು. ನಾವು ಯಾವುದೇ ತಪ್ಪು ಮಾಡಿಲ್ಲ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಮೇಲೆ ಆರೋಪ ಮಾಡಿದರು. ಇದಕ್ಕೆಲ್ಲ ಉಪಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದ ಅವರು, ಸಚಿವ ಸಂಪುಟ ಪುನರ್ ರಚನೆ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಹೇಳಿದರು.