

ಜಗತ್ತು ಬೆಳೆದಂತೆ ನಾವು ಅಂಧಕಾರದ ಯುಗದ ಕಡೆಗೆ ಮುಖ ಮಾಡುತ್ತಿದ್ದೇವೆ ಎಂದು ಜಾನಪದ ಗಾಯಕ ಪ್ರೊ.ಮೈಸೂರು ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು.
ನಗರದ ಯುವರಾಜ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ 2025-26ನೇ ಸಾಲಿನ ‘ಜ್ಞಾನವಾಹಿನಿ’, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಜಗತ್ತು ಎರಡು ಮಹಾಯುದ್ಧಗಳನ್ನು ಕಂಡಿದೆ. ತಂತ್ರಜ್ಞಾನ, ವಿಜ್ಞಾನದಿಂದ ಅತ್ಯಾಧುನಿಕ ಯುದ್ಧ ಸಲಕರಣೆಗಳನ್ನು ಎಲ್ಲ ದೇಶಗಳು ಸಿದ್ಧಪಡಿಸಿಕೊಂಡಿದ್ದು, ಮೂರನೇ ಮಹಾಯುದ್ಧವಾದರೆ ಅಂಧಕಾರದ ಯುಗದ ಸೃಷ್ಟಿ ಕಟ್ಟಿಟ್ಟ ಬುತ್ತಿ ಎಂದರು.
ಸಾಮಾಜಿಕ ಮಾಧ್ಯಮಗಳ ಹಾವಳಿಯಿಂದ ಯುವ ಸಮೂಹವನ್ನು ಕಾಪಾಡಿಕೊಳ್ಳಬೇಕಿದೆ. ಸಾಂಸ್ಕೃತಿಕ ಚಟುವಟಿಕೆಗಳು, ಕಲೆಗಳ ಮೂಲಕ ವಾಸ್ತವದ ನೆಲೆಗಟ್ಟಿಗೆ ತಂದು ಕಲೆಗಳ ಮಿಲನವಾಗಿಸಬೇಕಿದೆ. ಇಂದಿನ ಯುವಕರು ಸಾಮಾಜಿಕ ಮಾಧ್ಯಮ, ರೀಲ್ಸ್ ಭೂತಕ್ಕೆ ಸಿಲುಕಿ ವಾಸ್ತವತೆ, ಸತ್ಯದ ಹಾದಿ ಮರೆತಿದ್ದಾರೆ. ರೀಲ್ಸ್ ಕಲ್ಪನೆಗಳಲ್ಲಿ ಮುನ್ನುಗ್ಗುತ್ತಿದ್ದು, ಇದು ಅವರನ್ನು ಯಾವ ಸ್ಥಿತಿಗೆ ನೂಕುತ್ತದೆ ಎಂದು ಊಹಿಸಲೂ ಅಸಾಧ್ಯವಾಗಿದೆ ಎಂದರು.
ನಾವೆಲ್ಲರೂ ಪರಮ ಆಧ್ಯಾತ್ಮಿಕ ಯುಗದ ಕಡೆಗೆ ನಡೆಯಬೇಕಿದೆ. ಆಧ್ಯಾತ್ಮಿಕ ಯುಗ ಎಂದರೆ ಅದು ಮನುಷ್ಯನ ಒಳ್ಳೆತನ. ಅದನ್ನು ಬಳಸಿಕೊಂಡು ಒಟ್ಟು ಸಂತೋಷ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದರು.
ಜೋಯಿಸ್ ಕಲಾ ಪ್ರತಿಷ್ಠಾನದ ಸಂಸ್ಥಾಪಕಿ ವಿದುಷಿ ನಮ್ರತಾ ಜೋಯಿಸ್, ಪ್ರಾಂಶುಪಾಲ ಪ್ರೊ.ಮಹದೇವ ಮೂರ್ತಿ, ಆಡಳಿತಾಧಿಕಾರಿ ಪ್ರೊ.ಕೆ.ಅಜಯ್‌ಕುಮಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಸಿ.ನಾಗೇಶ್ ಬಾಬು, ಜ್ಞಾನವಾಹಿನಿ ಸಮಿತಿ ಸಂಚಾಲಕ ಪ್ರೊ.ಸಿ.ಡಿ.ಪರುಶುರಾಮ್, ಐಕ್ಯೂಎಸಿ ಸಂಯೋಜಕ ಪ್ರೊ.ಪಿ.ಕೆ.ಮಹೇಶ್ವರ್ ಇತರರಿದ್ದರು.