

ಮೂಡಿಗೆರೆ: ಪಟ್ಟಣದ ಗೆಂಡೆಹಳ್ಳಿ ರಸ್ತೆ ಬದಿಯಲ್ಲಿ ಕಸದರಾಶಿ ಬಿದ್ದಿದ್ದು, ರಸ್ತೆಯಲ್ಲಿ ಸಾಗುವವರು ದುರ್ವಾಸನೆಯಿಂದ ಮೂಗುಮುಚ್ಚಿಕೊಂಡು ಹೋಗುವಂತಾಗಿದೆ. ಕೆಲವರು ರಸ್ತೆ ಬದಲಿಸಿ ದೊಡ್ಡಿ ಬೀದಿಯ ಒಳರಸ್ತೆ ಮೂಲಕ ಸಾಗುತ್ತಿದ್ದಾರೆ.
ಬೀಡಾಡಿ ಜಾನುವಾರುಗಳು, ಕಸದೊಂದಿಗೆ ಪ್ಲಾಸ್ಟಿಕ್ ಸೇರಿದಂತೆ ವಿಷಯುಕ್ತ ತ್ಯಾಜ್ಯವನ್ನು ತಿಂದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿವೆ. ಪಟ್ಟಣದಲ್ಲಿ ಪ್ರತಿದಿನ ಸಂಗ್ರಹವಾಗುವ ಕಸವನ್ನು ಗೆಂಡೆಹಳ್ಳಿ ರಸ್ತೆ ಬದಿಯಲ್ಲಿ ಪಪಂಗೆ ಸೇರಿದ ಟಿಪ್ಪರ್ ವಾಹನ ಮತ್ತು ಟ್ರಾೃಕ್ಟರ್‌ಗೆ ಸುರಿದು ಅಲ್ಲಿಂದ ನಂದಿಪುರ ಅರಣ್ಯ ಭಾಗದಲ್ಲಿ ನಿರ್ಮಿಸಿರುವ ಕಸ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತದೆ. ಕೆಲವೊಮ್ಮೆ ಪಟ್ಟಣದ ಕಸವನ್ನು ಟಿಪ್ಪರ್ ಆಟೋದಲ್ಲಿ ತಂದು ರಸ್ತೆ ಬದಿಯಲ್ಲಿ ಸುರಿಯುತ್ತಾರೆ. ಹಾಗೆ ಸುರಿದ ಕಸವನ್ನು ಟಿಪ್ಪರ್ ಅಥವಾ ಟ್ರಾೃಕ್ಟರ್‌ಗೆ ತುಂಬಿಸಿ ಸಾಗಿಸಬೇಕು. ಆದರೆ ಕಳೆದ ಒಂದೂವರೆ ವರ್ಷದಿಂದ ರಸ್ತೆ ಬದಿಯಲ್ಲಿ ಕಸವನ್ನು ತೆರವುಗೊಳಿಸದೆ ರಾಶಿ ಬಿದ್ದಿದೆ. ಅಲ್ಲದೆ ಪಪಂಗೆ ಸೇರಿದ ಟಿಪ್ಪರ್ ವಾಹನವೊಂದು ಅದೇ ಸ್ಥಳದಲ್ಲಿ ನಿಂತಿದೆ.
ಮನೆಗಳಿಂದ ಸಂಗ್ರಹವಾಗುವ ಕಸ, ಹೋಟೆಲ್ ಮತ್ತು ಕೋಳಿ, ಮೀನು, ಮಾಂಸದಂಗಡಿಯ ತ್ಯಾಜ್ಯ, ಸತ್ತ ಹೆಗ್ಗಣಗಳ ಕಳೆಬರವನ್ನು ಇದೆ ಸ್ಥಳದಲ್ಲಿ ಸುರಿದು ಹೋಗುತ್ತಿದ್ದರೂ ಪಪಂ ಆಡಳಿತ ಮಾತ್ರ ಮೌನವಹಿಸಿದೆ. ಪೌರ ಕಾರ್ಮಿಕರು ಪಟ್ಟಣದಲ್ಲಿ ಗುಡಿಸಿದ ಕಸವನ್ನು ಸಾಗಿಸುವ ಕೈಗಾಡಿಯೊಂದನ್ನು ಒಂದು ವರ್ಷದ ಹಿಂದೆ ಬಿಟ್ಟ ಸ್ಥಳದಲ್ಲೇ ಈಗಲೂ ಇದೆ.
ಅಗತ್ಯ ಕ್ರಮ: ಪಟ್ಟಣದಲ್ಲಿ ಸಂಗ್ರಹವಾಗುವ ಕಸವನ್ನು ಗೆಂಡೆಹಳ್ಳಿ ರಸ್ತೆ ಬದಿಯಲ್ಲಿ ಸಂಗ್ರಹಿಸಿ ದೊಡ್ಡ ವಾಹನಕ್ಕೆ ತುಂಬಿಸಿ ಕಸ ವಿಲೆವಾರಿ ಘಟಕಕ್ಕೆ ಸಾಗಿಸಲಾಗುತ್ತದೆ. ಆ ಸ್ಥಳದಲ್ಲಿ ಪೌರಕಾರ್ಮಿಕರು ಕಸ ಸುರಿಯುವುದಿಲ್ಲ. ಪಟ್ಟಣದಿಂದ ಕೆಲವರು ಕಸ ತಂದು ಬಿಸಾಡುವ ಕಾರಣ ಅಲ್ಲಿ ಕಸದ ರಾಶಿ ಬಿದ್ದಿದೆ ಎಂದು ಪಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್ ತಿಳಿಸಿದ್ದಾರೆ. ಕಸ ತೆರವುಗೊಳಿಸಿ ಸ್ವಚ್ಛಗೊಳಿಸಲಾಗುವುದು. ಪಟ್ಟಣದ ತತ್ಕೊಳ ರಸ್ತೆ ಸೇರಿದಂತೆ ವಿವಿಧ ರಸ್ತೆ ಬದಿಯಲ್ಲಿ ಸ್ಥಳೀಯರು ಕಸ ಸುರಿಯುತ್ತಿದ್ದಾರೆ. ಅಲ್ಲಿಗೆ ಇಂಟರ್‌ಲಾಕ್ ಟೈಲ್ಸ್ ಅಳವಡಿಸಿ ಕಸ ಸುರಿಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದ್ದಾರೆ.