ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ ಆಚರಣೆ

Moharam
Published on

ಚಿತ್ರದುರ್ಗ: ತಾಲೂಕಿನ ಗ್ರಾಮವೊಂದರಲ್ಲಿ ಮುಸ್ಲಿಮರಿಲ್ಲ. ಆದರೂ ಇಲ್ಲಿ ಮೊಹರಂ ಹಬ್ಬಕ್ಕೆ ಈವರೆಗೂ ಕೊರತೆ ಉಂಟಾಗಿಲ್ಲ. ನಗರದಿಂದ ಮುಸ್ಲಿಂ ಸಮುದಾಯದವರನ್ನು ಆತ್ಮೀಯವಾಗಿ ಆಹ್ವಾನಿಸಿ, ಧಾರ್ಮಿಕ ಕಾರ್ಯವನ್ನು ಹಿಂದು ಧರ್ಮೀಯರು ನೆರವೇರಿಸುವ ಮೂಲಕ ಬುಧವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಹಿಂದು-ಮುಸ್ಲಿಮರ ಭಾವೈಕ್ಯದ ಹಬ್ಬವೆಂದು ಬಿಂಬಿತವಾಗಿರುವ ಮೊಹರಂ ಅನ್ನು 10 ದಿನವೂ ವಿಶೇಷವಾಗಿ ಆಚರಿಸಿದ ಗ್ರಾಮವೇ ಬಚ್ಚಬೋರನಹಟ್ಟಿ.

ಈ ಹಬ್ಬವನ್ನಾಚರಿಸುವ ಗ್ರಾಮಗಳಲ್ಲಿ ಬಚ್ಚಬೋರನಹಟ್ಟಿ ಕೂಡ ಮುಂಚೂಣಿಯಲ್ಲಿದ್ದು, ಅಮಾವಾಸ್ಯೆಯ 3 ದಿನದ ನಂತರ ಪೀರಲ ದೇವರ ಪ್ರತಿಷ್ಠಾಪಿಸುವ ಸ್ಥಳದ ಮುಂಭಾಗ ಅಲ್ಲಾದ ಗುಣಿಗೆ ಗುದ್ದಲಿ ಪೂಜೆ ನೆರವೇರಿಸಿ, ವಿದ್ಯುಕ್ತವಾಗಿ ಚಾಲನೆ ನೀಡಲಾಗಿತ್ತು.

ನಂತರ ಪೆಟ್ಟಿಗೆಯಲ್ಲಿನ ದೇವರ ಮೂರ್ತಿಗಳನ್ನು ಹೊರತೆಗೆದು ಪ್ರತಿಷ್ಠಾಪಿಸಿ, 10 ದಿನ ಹಲವು ಧಾರ್ಮಿಕ ವಿಧಿವಿಧಾನಗಳ ಮೂಲಕ ಈ ಬಾರಿಯೂ ಗ್ರಾಮಸ್ಥರು ಆಚರಿಸಿದರು.

ಹಬ್ಬದ ಕೊನೆ ದಿನ ಮಂಗಳವಾರ ರಾತ್ರಿ ಭಕ್ತರು ದೇವರಿಗೆ ಮಂಡಕ್ಕಿ, ಸಕ್ಕರೆ, ಬೆಲ್ಲ, ಕೆಂಪುದಾರವನ್ನು ಅರ್ಪಿಸಿ, ಇಷ್ಠಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು. ಬುಧವಾರ ಬೆಳಗ್ಗೆ ಮತ್ತು ಸಂಜೆ ಪೀರಲ ದೇವರನ್ನು ಹೊತ್ತು ಹರಕೆ ಹೊತ್ತವರು ಕೆಂಡಸೇವೆ ಸಲ್ಲಿಸಿದರು. ಎರಡು ಬಾರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಬಳಿಕ ನೀರಿಗೆ ಅರ್ಪಿಸಿದ ನಂತರ ಹಬ್ಬಕ್ಕೆ ತೆರೆಬಿದ್ದಿತು.

ಗಮನ ಸೆಳೆದ ವೇಷಧಾರಿಗಳು: ಹಬ್ಬದ ಆಚರಣೆಯಲ್ಲಿ ಸ್ತ್ರೀ, ಅಳ್ಳಲ್ಲಿ ಬುಕ್ಕ, ಗಂಡ, ಹೆಂಡತಿ ವೇಷ ಸೇರಿ ವಿಶೇಷ ವೇಷಧಾರಿಗಳು ಗಮನ ಸೆಳೆದರು. ನಂತರ ಮನೆ-ಮನೆಗೆ ಹೋಗಿ ಕಾಣಿಕೆ ಪಡೆದು ಹರಕೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net