

ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟೂರು ಮತ್ತು ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ಮಾಡುವ ಮೂಲಕ ಮುಸ್ಲಿಮರು ರಾಜ್ಯದಲ್ಲಿ ಜಿಹಾದಿ ಮನಸ್ಥಿತಿಯನ್ನು ಹುಟ್ಟುಹಾಕುತ್ತಿದ್ದಾರೆ. ಅದರ ವಿರುದ್ಧವೇ ನಾವೆಲ್ಲರೂ ಹೋರಾಡಬೇಕಿದೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳ್ಳಾರೆಯ ಪ್ರವೀಣ್ ಹತ್ಯೆ ಬಳಿಕ ಬಿಜೆಪಿಯ ಕೆಲ ಶಾಸಕರು ಮತ್ತು ಕಾರ್ಯಕರ್ತರು ರಾಜೀನಾಮೆಗೆ ಮುಂದಾಗಿರುವುದು ಹೇಯ ಕೃತ್ಯ. ಅಧಿಕಾರದಲ್ಲಿದ್ದು ಸರಿಪಡಿಸಬೇಕೋ ವಿನಃ ರಾಜೀನಾಮೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.
ಈ ಹಿಂದೆ ಭಾರತೀಯ ಜನಸಂಘದ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳು ಉಪಾಧ್ಯಯ ಅವರನ್ನೇ ಕೊಲೆ ಮಾಡಲಾಯಿತು. ಅವರೆಲ್ಲರೂ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡದೆ ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಹಾಗಾಗಿ ನಮ್ಮ ಕಾರ್ಯಕರ್ತರಿಗೆ ಪ್ರಬುದ್ಧತೆ ಕಡಿಮೆ ಇದೆ. ರಾಜೀನಾಮೆ ನೀಡಿರುವ ವಿಚಾರದಲ್ಲಿ ಅವರನ್ನು ಸಮಾಧಾನ ಪಡಿಸಲಾಗುವುದು ಎಂದರು.
ಈಗ ಕಾನೂನು ಸುವ್ಯವಸ್ಥೆಯಲ್ಲಿ ಉತ್ತರ ಪ್ರದೇಶದ ಮಾದರಿಯಲ್ಲಿ ತರಬೇಕಾ ಅಥವಾ ಬೇಡವಾ ಎಂಬ ಚರ್ಚೆ ಆಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರೇ ಉತ್ತರ ಪ್ರದೇಶ ಮಾದರಿಯ ಆಡಳಿತವನ್ನು ಅವಶ್ಯಕತೆ ಬಿದ್ದರೆ ತರಲಾಗುವುದು ಎಂದಿದ್ದಾರೆ. ಅಲ್ಲಿಯವರೆಗೆ ಹೋಗುವುದು ಬೇಡ ಎಂಬುದು ನನ್ನ ಭಾವನೆ. ಅದೇ ಬೇಕು ಎಂದು ಬಯಸಿ ಮುಸ್ಲಿಮುರು ಕೊಲೆ ಮಾಡುವ ಪ್ರವೃತ್ತಿಯನ್ನು ಮುಂದುವರಿಸಿದರೆ ಅವರೇ ಅನುಭವಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಕೆಲ ಇಲಾಖೆಗಳಲ್ಲಿ ಗುಜರಾತ್ ಮಾದರಿ ಜಾರಿಗೊಳಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ನರೇಗಾ ಯೋಜನೆಯನ್ನು ಸಮರ್ಪಕವಾಗಿ ನಡೆಸಿ ನನ್ನ ಅವಧಿಯಲ್ಲಿ ದೇಶದಲ್ಲಿ ನಂ.1 ಸ್ಥಾನಕ್ಕೆ ಕರ್ನಾಟಕವನ್ನು ತೆಗೆದುಕೊಂಡು ಹೋಗಲಾಯಿತು ಎಂದು ಈಶ್ವರಪ್ಪ ಹೇಳಿದರು.