ಮುರುಘಾಮಠ ಆಡಳಿತ ಸಮಿತಿ ಅಧ್ಯಕ್ಷರಾಗಿ ಕಳಸದ್

kalasad
Published on

ಚಿತ್ರದುರ್ಗ: ಚಿತ್ರದುರ್ಗ ಮುರುಘಾಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಸಮಿತಿ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಸಿ ಕಳಸದ್ ಅವರನ್ನು ರಾಜ್ಯಪಾಲರ ಆದೇಶಾನುಸಾರ ಶುಕ್ರವಾರ ನೇಮಿಸಿರುವುದಾಗಿ ಕಂದಾಯ ಇಲಾಖೆ (ಧಾರ್ಮಿಕ ದತ್ತಿ) ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಪಿ.ಹೇಮಂತರಾಜು ತಿಳಿಸಿದ್ದಾರೆ.

ಆಡಳಿತ ನಿರ್ವಹಣೆ ಸಂಬಂಧ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಫೆ. 27ರಂದು ನಿರ್ದೇಶಿಸಿತ್ತು. ನೀಡಿದ್ದ ಮೂರು ದಿನದ ಗಡುವಿನೊಳಗೆ ರಾಜ್ಯ ಸರ್ಕಾರ ಈ ಕ್ರಮವಹಿಸಿದೆ. ಸದ್ಯದಲ್ಲೇ ಸಮಿತಿ ಸದಸ್ಯರನ್ನು ನೇಮಿಸಿ ಆದೇಶಿಸುವುದಾಗಿಯೂ ಸ್ಪಷ್ಟಪಡಿಸಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ಹಿನ್ನೆಲೆ: ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಮಠ ಹಾಗೂ ವಿದ್ಯಾಪೀಠದ ಅಧಿಕಾರ ಚಲಾಯಿಸದಂತೆ ಚಿತ್ರದುರ್ಗ ಸೆಷನ್ಸ್ ನ್ಯಾಯಾಲಯವು ಧಾರ್ಮಿಕ ಸಂಸ್ಥೆಗಳ (ದುರುಪಯೋಗ ತಡೆ) ಕಾಯ್ದೆ- 1988ರಡಿ ಈ ಹಿಂದೆ ನಿರ್ಬಂಧ ವಿಧಿಸಿತ್ತು. ಈ ಆದೇಶವನ್ನು ಹೈಕೋರ್ಟ್ ಈಚೆಗೆ ವಜಾಗೊಳಿಸಿದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2023ರ ಡಿ.5 ರಂದು ಶರಣರಿಗೆ ಅಧಿಕಾರ ಹಸ್ತಾಂತರಿಸಿತ್ತು.

ಈ ಮಧ್ಯೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಮಾಜಿ ಸಚಿವ ಎಚ್.ಏಕಾಂತಯ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಸಲ್ಲಿಸಿರುವ ಅರ್ಜಿ ಇತ್ಯರ್ಥ ಆಗುವವರೆಗೆ ಈ ಸಮಿತಿ ಅಸ್ತಿತ್ವದಲ್ಲಿರುತ್ತದೆ ಎಂದು ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಹಾಗೂ ಪ್ರಶಾಂತ್‌ಕುಮಾರ್ ಮಿಶ್ರಾ ಅವರಿದ್ದ ಪೀಠವು ಅರ್ಜಿ ವಿಚಾರಣೆ ನಡೆಸಿ ನಿರ್ದೇಶನ ನೀಡಿದ್ದರಿಂದ ರಾಜ್ಯ ಸರ್ಕಾರ ಈ ಕ್ರಮವಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net