ಮುರುಘಾ ಮಠಕ್ಕೆ ಹೊಸ ಸಮಿತಿ ನಿರ್ಣಯ ಪ್ರಶ್ನಿಸಿ ರಿಟ್

CTD 14 MLC K.S.NAVIN--02
Published on

ಚಿತ್ರದುರ್ಗ: ಆಡಳಿತಾಧಿಕಾರಿ ನೇಮಕ ರದ್ದುಗೊಳಿಸಿದ ಹೈಕೋರ್ಟ್ ಆದೇಶದ ಬೆನ್ನಲ್ಲೇ ಕೆಲವರು ತರಾತುರಿಯಲ್ಲಿ ಮುರುಘಾಮಠ , ಎಸ್‌ಜೆಎಂ ವಿದ್ಯಾಪೀಠದ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆ ಎಂದು ಎಂಎಲ್‌ಸಿ, ಎಸ್‌ಜೆಎಂ ವಿವಿ ಆಡಳಿತ ಮಂಡಳಿ ಸದಸ್ಯ ಕೆ.ಎಸ್.ನವೀನ್ ದೂರಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಡಳಿತಕ್ಕೆ ಸಂಬಂಧಿಸಿದಂತೆ ಜುಲೈ 4ರೊಳಗೆ ಭಕ್ತರು, ಸಾರ್ವಜನಿಕರು, ವಿವಿಧ ಸಮುದಾಯಗಳ ಪ್ರಮುಖರ ಸಭೆ ಕರೆದು ನಿರ್ಣಯಿಸುವಂತೆ ಮೇ 22ರ ಕೋರ್ಟ್ ಆದೇಶಿಸಿದೆ. ಈ ಕುರಿತಂತೆ ಆಡಳಿತಾಧಿಕಾರಿ ಪಿ.ಎಸ್. ವಸ್ತ್ರದ ಅವರು ಕಂದಾಯ ಇಲಾಖೆಗೆ ಪತ್ರ ಬರೆದು ಮಾರ್ಗದರ್ಶನ ಕೋರಿದ್ದಾರೆ ಎಂದರು.
ಇಲಾಖೆ ಕಾರ‌್ಯದರ್ಶಿ ಕಾನೂನು ಸಲಹೆ ಕೋರಿರುವ ನಡುವೆಯೇ, ನೂರಾರು ಶಾಖಾ ಮಠಗಳನ್ನು ಹೊಂದಿರುವ ಮಠದ ಹಿಂದಿನ ಸಮಿತಿ ಸದಸ್ಯರು ಸೇರಿ ಅನೇಕರಿಗೆ ಸಾರ್ವಜನಿಕವಾಗಿ ವಿಷಯ ತಿಳಿಸದೆ ಆತುರದಲ್ಲಿ 50-100 ಜನರು ಸೇರಿ ಮಠ, ವಿದ್ಯಾಪೀಠದ ಆಡಳಿತಕ್ಕೆ ಸಂಬಂಧಿಸಿದ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಹಲವರ ಸಹಿಗಳನ್ನು ಖಾಲಿ ಪೇಪರ್‌ಗೆ ಹಾಕಿಸಿಕೊಳ್ಳಲಾಗಿದ್ದು, ನಿರ್ಣಯದ ವಿರುದ್ಧ ನಾನು, ಇತರರು ಹೈಕೋರ್ಟ್ ಮೊರೆ ಹೋಗಿದ್ದೇವೆ. ಇದರ ವಿಚಾರಣೆ ಶೀಘ್ರ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿದರು.
ರಾಜಾಶ್ರಯದ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಐತಿಹಾಸಿಕ ಮಠಕ್ಕೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರವೊಂದೇ ಅಲ್ಲ, ರಾಜ್ಯ, ಹೊರ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರಿದ್ದಾರೆ. ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನೇ ಮಠಕ್ಕೆ ದಾನ ಬರೆದವರಿದ್ದಾರೆ. ನಾನು ಸೇರಿ ಮಠದ ಟ್ರಸ್ಟ್‌ನಲ್ಲಿ 21 ಸದಸ್ಯರಿದ್ದೇವೆ ಎಂದರು.
ಆಡಳಿತಾಧಿಕಾರಿ ಅವಧಿ ತಾತ್ಕಾಲಿಕ ಸಲಹಾ ಸಮಿತಿ ಕೂಡ ಪ್ರತ್ಯೇಕವಾಗಿದೆ. ಇವುಗಳಿನ್ನ್ನೂ ಊರ್ಜಿತವಿರುವ ಸನ್ನಿವೇಶದಲ್ಲಿ ಏಕಾಏಕಿ ಸಭೆ ಕರೆದಿದ್ದೇವೆ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಲಾಗಿದೆ. ಶ್ರೀ ಬಸವಪ್ರಭು ಸ್ವಾಮೀಜಿ ಅವರ ನೇತೃತ್ವ ಧಾರ್ಮಿಕ ಕೈಂಕರ್ಯಗಳಿಗೆ ನಮ್ಮ ಆಕ್ಷೇಪವಿಲ್ಲ ಎಂದು ಹೇಳಿದರು.
ನವ ಕೋಟಿ ನಾರಾಯಣ ಹೆಸರಿನ ಮಠಕ್ಕೆ ಅಂದಾಜು 40 ಕೋಟಿ ರೂ. ಸಾಲವಿದೆ. ಆಡಳಿತಾಧಿಕಾರಿ ನೇಮಕ ಬಳಿಕ ಈವರೆಗೆ ಅಂದಾಜು 10.50 ಕೋಟಿ ರೂ. ಸಾಲವನ್ನು ಮರು ಪಾವತಿಸಲಾಗಿದೆ. ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತಿತರ ವಿಚಾರಗಳಲ್ಲಿ ಬ್ಯಾಂಕ್ ಗ್ಯಾರಂಟಿ ಮೊಬಲಗು ಹತ್ತಾರು ಕೋಟಿ ರೂ. ಗಳನ್ನು ಮರಳಿ ಪಡೆಯಲು ಶ್ರಮಿಸಿದ್ದೇವೆ. ಮೆಡಿಕಲ್ ಕಾಲೇಜು ಮುಚ್ಚುವ ಹಂತಕ್ಕೆ ಬಂದಿತ್ತು. ಮಠ-ವಿದ್ಯಾಪೀಠದ ಎಲ್ಲ ಸಂಸ್ಥೆಗಳನ್ನು ಸರಿ ದಾರಿಗೆ ತರಲು, ಆಸ್ತಿ ಸಂರಕ್ಷಿಸಲು ಪಾರದರ್ಶಕವಾಗಿ ಪ್ರಯತ್ನಿಸಿದ್ದೇವೆ ಎಂದರು.
ಪ್ರಸ್ತುತ ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ಗೊಂದಲ ನಿವಾರಿಸುವಂತೆ ಹಾಗೂ ಆಡಳಿತಾಧಿಕಾರಿ ಮುಂದುವರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು.ಆನೆ ನಡೆದಿದ್ದೇ ದಾರಿ ಎಂದು ಗೊಂದಲಗಳು ಮುಂದುವರಿದರೆ ರಾಜ್ಯಾದ್ಯಂತ ಮುರುಘಾ ಮ ಠ ಉಳಿಸಿ ಅಭಿಯಾನ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಅಭಿಯಾನಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸೇರಿ ನಾನಾ ಸಮುದಾಯಗಳ ಪ್ರಮುಖರು, ವಿವಿಧ ಮಠಗಳು, ಬಸವಕೇಂದ್ರಗಳ ಸಹಕಾರ ಪಡೆಯಲಾಗುವುದು. ಜನಪ್ರತಿನಿಧಿಯಾಗಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಮಠದ ಆಗು, ಹೋಗುಗಳಿಗೆ ಸ್ಪಂದಿಸುವುದಕ್ಕೆ ತಕರಾರಿಲ್ಲ. ಆದರೆ, ಅವರು ಆತುರದಿಂದ ಕಾರ‌್ಯದರ್ಶಿಯಾಗಿದ್ದಾರೆ. ಕೋರ್ಟ್ ಆದೇಶದನ್ವಯ ನಡೆದರೆ ಮಠದ ಪ್ರಗತಿ ಸಾಧ್ಯವಿದೆ ಎಂದರು.

ಸರ್ಕಾರದಲ್ಲಿ ‘ಹಸ್ತ’ಕ್ಷೇಪ ಸರಿಯಲ್ಲ

ಸಾವಿರ ಸುಳ್ಳುಗಳನ್ನು ಹೇಳಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತದಿಂದ ಜನರು ಸಂಕಷ್ಟ ಅನುಭವಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.

ಗ್ಯಾರಂಟಿಗಳಿಗೆ ಷರತ್ತುಗಳನ್ನು ವಿಧಿಸುತ್ತಿರುವ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಜಲಾಶಯಗಳು ಬರಿದ್ದಾಗುತ್ತಿದ್ದು, ವಿದ್ಯುತ್, ಬಸ್ ಸಂಚಾರ ವಿಷಯದಲ್ಲಿ ಖಂಡಿತ ಜನರು ಕಷ್ಟಗಳನ್ನು ಅನುಭವಿಸಲಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಂತ್ರಿಗಳಿಗೆ ಆಡಳಿತ ನಡೆಸಲು ಬರುವುದಿಲ್ಲ. ನಾವು ಹೇಳಿದ್ದನ್ನು ಮಾಡುವಂತೆ ಕಾಂಗ್ರೆಸ್ ಹೈಕಮಾಮಡ್ ಸೂಚಿಸುತ್ತಿದೆ ಎಂಬುದಕ್ಕೆ ಕರ್ನಾಟಕದ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ ಅಧಿಕಾರಿಗಳೊಂದಿಗೆ ನಡೆಸಿರುವ ಸಭೆ ಸಾಕ್ಷಿಯಾಗಿದೆ ಎಂದು ದೂರಿದರು.

ಕರ್ನಾಟಕ ಅಭಿವೃದ್ಧಿಯಲ್ಲಿ ಮುಂದಿದೆ. ಅಧಿಕಾರಿಗಳಿಗೆ ಆಡಳಿತ ಗೊತ್ತಿದೆ. ಇದು ಹೀಗೆ ಮುಂದುವರಿದರೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದರು.

ಬಿಜೆಪಿ-ಕಾಂಗ್ರೆಸ್ ನಡುವೆ ಒಳ ಒಪ್ಪಂದವಾಗಿದೆ ಎಂಬ ಸಂಸದ ಪ್ರತಾಪ್ ಸಿಂಹ, ಮಾಜಿ ಮಂತ್ರಿ ಸಿ.ಟಿ.ರವಿ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬು ದು ಗೊತ್ತಿಲ್ಲ. ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ. ಇದಕ್ಕಾಗಿ ನಮ್ಮ ಕಾರ‌್ಯಕರ್ತರಿಗೆ ತೊಂದರೆ ಆಗಬಾರದು ಎಂಬುದಕ್ಕಾಗಿ ಪಕ್ಷದಲ್ಲಿ ಹೆಲ್ಫ್‌ಲೈನ್ ಆರಂಭಿಸಲಾಗಿದೆ. ಒಳ ಒಪ್ಪಂದವಾಗಿದೆಂಬ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net