

ಹುಣಸೂರು: ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ತಾಲೂಕಿನ ಬಿಳಿಕೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ವಸತಿ ಸಮುಚ್ಚಯಗಳ ಶಿಕ್ಷಣ ಸಂಸ್ಥೆ(ಕ್ರೈಸ್) ಇತ್ತೀಚೆಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮೈಸೂರು ವಿಭಾ ವ್ಯಾಪ್ತಿಯಲ್ಲಿ ಹುಣಸೂರಿನ ಬಿಳಿಕೆರೆ ಹೋಬಳಿ ಸಬ್ಬನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳ ತಂಡ ತೃತೀಯ ಸ್ಥಾನ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಕೃಷಿ ಕ್ಷೇತ್ರವನ್ನು ತಂಡದ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡು ಕೃಷಿಯಲ್ಲಿ ಒಂದು ಯಂತ್ರದ ಮೂಲಕ 5 ವಿವಿಧ ಕಾರ್ಯಗಳನ್ನು ನಿರ್ವಹಿಸುವ ತಂತ್ರಜ್ಞಾನವನ್ನು ಪ್ರದರ್ಶಿಸಿದ್ದಾರೆ. ಯಂತ್ರದ ಮೂಲಕ ಕೀಟನಾಶಕ ಸಿಂಪಡಣೆ, ಸೌರಶಕ್ತಿ ಬಳಸಿಕೊಂಡು ಬ್ಯಾಟರಿ ರಿಚಾರ್ಜ್, ಹಾಗೂ ಸೌರಶಕ್ತಿ ಲಭ್ಯವಿರದ ಸಮಯದಲ್ಲಿ ಡೈನಮೋ ಸಹಾಯದಿಂದ ಯಂತ್ರ ಚಾಲನೆ, ಯಂತ್ರ ಚಾಲನೆ ಮಾಡುವಾಗ ಶಬ್ದದಿಂದ ಹಕ್ಕಿ ಪಕ್ಷಿಗಳನ್ನು ಓಡಿಸಿ ಬೆಳೆ ರಕ್ಷಣೆ ಮಾಡುವುದು, ಹಾಗೂ ಬಲ್ಬುಗಳ ಸಹಾಯದಿಂದ ಬೆಳಕು ನೀಡುವ ತಂತ್ರಜ್ಞಾನವನ್ನು ಸಿದ್ಧಪಡಿಸಿ ಪ್ರದರ್ಶಿಸಿದರು.
ವಿಜ್ಞಾನ ಶಿಕ್ಷಕಿ ಸುನಂದಾ ಅವರ ಮಾರ್ಗದರ್ಶನದಲ್ಲಿ 9ನೇ ತರಗತಿ ವಿದ್ಯಾರ್ಥಿಗಳಾದ ಭೂಮಿಕಾ, ಬಿ.ಐಶ್ವರ್ಯಾ, ಆರ್.ತನುಷ್, ಪೃಥ್ವಿರಾಜ್ ಪಾಲ್ಗೊಂಡಿದ್ದರು. ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಬಹುಮಾನ ಹಾಗೂ ಪ್ರಶಸ್ತಿಗಳನ್ನು ವಿತರಿಸಿದರು. ವಿಜ್ಞಾನ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾಗಿರುವ 200 ವಸತಿ ಶಾಲೆಗಳ ವಿದ್ಯಾರ್ಥಿಗಳು ವಿಜ್ಞಾನ ಮೇಳದಲ್ಲಿ ಭಾಗವಹಿಸಿದ್ದರು. ಶಾಸಕ ಎಚ್.ಪಿ.ಮಂಜುನಾಥ್ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.