ಮುರಾರ್ಜಿ ದೇಸಾಯಿ ವಸತಿ ಶಾಲೆ ಸಂಪೂರ್ಣ ಜಲಾವೃತ

ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಸಂಪೂರ್ಣ ಜಲಾವೃತಗೊಂಡಿರುವುದು.
16NGD2
Published on

ನಂಜನಗೂಡು: ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಕಡುಬಿನಕಟ್ಟೆ ಗೇಟ್ ಸಮೀಪದಲ್ಲಿರುವ ಸಿಂಧುವಳ್ಳಿ ಗ್ರಾಮದ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಸಂಪೂರ್ಣ ಜಲಾವೃತಗೊಂಡಿದ್ದು ಶಾಲೆಗೆ ಎರಡು ದಿನ ರಜೆ ಘೋಷಿಸಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ.


ಭಾರಿ ಮಳೆಯಿಂದಾಗಿ ಮುದ್ದಹಳ್ಳಿ ಗ್ರಾಮದ ಮೂಗನಕಟ್ಟೆ ಕೆರೆ ತುಂಬಿ ಕೋಡಿ ಬಿದ್ದಿದೆ. ಜತೆಗೆ ಮಳೆ ನೀರಿನಿಂದಾಗಿ ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿರುವ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಆವರಣ ಕೆರೆಯಂತಾಗಿದ್ದು ನೀರು ಶಾಲೆಯ ಅಂಗಳವನ್ನು ಆವರಿಸಿದೆ. ಜತೆಗೆ ವಸತಿ ಶಾಲೆಯ ಭೋಜನಾಲಯ ಹಾಗೂ ಬಾಲಕರ ವಸತಿ ನಿಲಯಕ್ಕೂ ನೀರು ನುಗ್ಗಿದೆ ಇನ್ನು ವಸತಿ ಶಾಲೆ ಆವರಣದಲ್ಲಿನ ಶೌಚಾಲಯದ ಗುಂಡಿಗಳೂ ಮಳೆ ನೀರಿನಿಂದ ತುಂಬಿ ಉಕ್ಕಿಹರಿಯುತ್ತಿದ್ದು ಶಾಲೆಯ ಆವರಣ ಗಬ್ಬೆದ್ದು ನಾರುವಂತಾಗಿದೆ.


ಕಲುಷಿತ ನೀರು ವಸತಿ ನಿಲಯದ ಆವರಣಕ್ಕೆ ನುಗ್ಗಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದಾಗಿ ಶಾಲೆಗೆ ಸೋಮವಾರ ಹಾಗೂ ಮಂಗಳವಾರ ಎರಡು ದಿನ ರಜೆ ಘೋಷಿಸಿ ಮಕ್ಕಳನ್ನು ಪಾಲಕರೊಡನೆ ಊರಿಗೆ ಕಳುಹಿಸಲಾಗಿದೆ.


ಕಳೆದ ಮೂರು ತಿಂಗಳ ಹಿಂದೆ ಸಹ ಶಾಲಾ ಆವರಣ ಮಳೆ ನೀರಿನಿಂದ ತುಂಬಿಕೊಂಡು ಕೆರೆಯಂತಾಗಿತ್ತು. ಈ ವೇಳೆ ಶಾಲಾ ಅಂಗಳದಲ್ಲಿ ಸಂಗ್ರಹಗೊಂಡಿದ್ದ ನೀರು ಹರಿದು ಹೋಗಲು ನೆರವಾಗುವಂತೆ ಮಣ್ಣಿನಲ್ಲಿ ಹೂತಿದ್ದ ಪೈಪ್‌ಗಳನ್ನು ದುರಸ್ತಿಪಡಿಸಲಾಗಿತ್ತಾದರೂ ಇದೀಗ ಮತ್ತೊಮ್ಮೆ ಹೆಚ್ಚಿನ ನೀರು ನುಗ್ಗಿರುವುದರಿಂದ ಸಂಕಷ್ಟ ಎದುರಾಗಿದೆ.
ಹೀಗಾಗಿ ಮಳೆ ನೀರು ಹಾಗೂ ಕೆರೆಯಿಂದ ಕೋಡಿ ಬಿದ್ದ ನೀರು ಸರಾಗವಾಗಿ ಹರಿದು ಹೋಗಲು ನೆರವಾಗುವಂತೆ ವಸತಿ ಶಾಲೆ ಸಮೀಪದಲ್ಲಿ ಸಣ್ಣ ಕಾಲುವೆಯೊಂದನ್ನು ನಿರ್ಮಿಸಿ ಈಗ ಇರುವ ಪೈಪ್‌ಗಳನ್ನು ತೆರವುಗೊಳಿಸಿ ಸೇತುವೆ ನಿರ್ಮಿಸುವಂತೆ ಪಾಲಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net