

ಧರ್ಮಾಪುರ: ಉದ್ದೂರ್ ಕಾವಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುಬಾರಕ್ ಬಾನು, ಉಪಾಧ್ಯಕ್ಷರಾಗಿ ಪದ್ಮಮ್ಮ ನಾರಾಯಣಗೌಡ ಅವಿರೋಧ ಆಯ್ಕೆಯಾದರು.
ಎರಡೂ ಸ್ಥಾನಗಳಿಗೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದವು. ಅಧ್ಯಕ್ಷ ಸ್ಥಾನಕ್ಕೆ ರತ್ನಪುರಿ ಗ್ರಾಮದ ಬ್ಯಾಡರಹಳ್ಳಿ ವಾರ್ಡ್ ನಂಬರ್ 2ರ ಸದಸ್ಯೆ ಮುಬಾರಕ್ ಬಾನು, ಬ್ಯಾಡರಹಳ್ಳಿ ವಾರ್ಡ್ ನಂಬರ್ 1ರ ಸದಸ್ಯೆ ಶಾಂತಿ, ಉಪಾಧ್ಯಕ್ಷ ಸ್ಥಾನಕ್ಕೆ ಗೌರಿಪುರ ಗ್ರಾಮದ ಪದ್ಮಮ್ಮ ನಾರಾಯಣಗೌಡ, ಹೊಸಕೋಟೆ ಗ್ರಾಮದ ಪವಿತ್ರಾ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದ ಶಾಂತಿ, ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದ ಪವಿತ್ರಾ ನಾಮಪತ್ರ ವಾಪಸ್ ಪಡೆದರು. ಹಾಗಾಗಿ ಚುನಾವಣಾಧಿಕಾರಿಯೂ ಆದ ಸಿಡಿಪಿಒ ರಶ್ಮಿ ಇಬ್ಬರ ಅವಿರೋಧ ಆಯ್ಕೆ ಪ್ರಕಟಿಸಿದರು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಶುಭಾಶಯ ಕೋರಿದರು. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆ ಮಾಡುವುದರ ಜತೆಗೆ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧರಾಗಬೇಕು ಎಂದರು.
ಸದಸ್ಯರಾದ ವೀರಭದ್ರಸ್ವಾಮಿ, ಮನುಕುಮಾರ್, ಗೋವಿಂದಶೆಟ್ಟಿ, ರಾಮಬೋವಿ, ವಿಜೇಂದ್ರಕುಮಾರ್, ಅಲ್ತಾಫ್ ಷರೀಫ್, ನಂದೀಶ್, ಜಿಪಂ ಮಾಜಿ ಸದಸ್ಯ ಡಿ.ಕೆ.ಕುನ್ನೇಗೌಡ, ತಾಪಂ ಸದಸ್ಯರಾದ ಗದ್ದಿಗೆ ದೇವರಾಜ್, ಅಜ್ಗರ್ ಪಾಷ, ಉದ್ಯಮಿಗಳಾದ ನಾಡಪನಹಳ್ಳಿ ರಾಜು, ಕೃಷ್ಣ, ದಸಂಸ ಮುಖಂಡ ಹರಿಹರ ಆನಂದಸ್ವಾಂಮಿ ಹಾಜರಿದ್ದರು.