ಮುತ್ತಪ್ಪ ‘ರೈ’ ಅವರ ಎರಡನೇ ಪತ್ನಿ ಅನುರಾಧಾಗೆ ಹೈಕೋರ್ಟ್ ರಿಲೀಫ್

highcourt
Published on

ಬೆಂಗಳೂರು: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ನಡೆದ ಕೊಲೆ ಯತ್ನ ಆರೋಪವಾಗಿ ಮಲತಾಯಿ ಅನುರಾಧ ರೈ ಅವರ ವಿರುದ್ಧ ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮಕ್ಕೆ ಮುಂದಾಗದಂತೆ ತನಿಖಾಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.

ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದು ಕೋರಿ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ಮತ್ತಪ್ಪ ರೈ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಘಟನೆಗೂ ಅರ್ಜಿದಾರರಿಗೂ ಯಾವುದೇ ತರನಾದ ಸಂಬಂಧವಿಲ್ಲ. ವಿನಾಕಾರಣ ಪ್ರಕರಣದಲ್ಲಿ ಅವರ ಹೆಸರನ್ನು ಎಳೆದು ತರಲಾಗಿದೆ. ರಿಕ್ಕಿ ರೈ ಹಾಗೂ ಅರ್ಜಿದಾರರ ನಡುವೆ ಆಸ್ತಿ ವಿವಾದ ಇತ್ತು ಎಂದು ಎಲ್ಲೆಡೆ ಸುದ್ದಿಯಾಗಿದೆ. ಆದರೆ ಈ ವಿಚಾರ ಆರು ತಿಂಗಳ ಹಿಂದೆಯೇ ಇತ್ಯರ್ಥವಾಗಿದೆ. ಜತೆಗೆ ಏ.14 ರಂದೇ ಅನುರಾಧಾ ರೈ ಪುತ್ರಿಯೊಂದಿಗೆ ಯೂರೋಪ್ ಗೆ ತೆರಳಿರುವುದಾಗಿ ಪೀಠದ ಮುಂದೆ ವಿವರಿಸಿದರು.

ಅಲ್ಲದೆ, ತನಿಖೆಗೆ ಅವರು ಎಲ್ಲ ರೀತಿಯಲ್ಲೂ ಸಹಕರಿಸಲು ಸಿದ್ಧರಿದ್ದಾರೆ. ಆದರೆ ಎ್ಐಆರ್‌ಗೆ ತಡೆ ನೀಡದಿದ್ದರೆ ಅರ್ಜಿದಾರರು ತನಿಖೆ ಹೆಸರಿನಲ್ಲಿ ಕಿರುಕುಳ ಎದುರಿಸುವ ಸಾಧ್ಯತೆ ಹೆಚ್ಚಿದೆ. ಈ ಎಲ್ಲ ಅಂಶ ಪರಿಗಣಿಸಿ ಘಟನೆಗೆ ಸಂಬಂಧಿಸಿದಂತೆ ದಾಖಲಿಸಿರುವ ಎಫ್‌ಐಆರ್ ಹಾಗೂ ಈ ಕುರಿತಂತೆ ರಾಮನಗರ ವಿಚಾರಣಾ ನ್ಯಾಯಾಲಯದ ಮುಂದಿರುವ ಪ್ರಕರಣದ ವಿಚಾರಣೆಗೆ ತಡೆ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಪೀಠ ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮಕ್ಕೆ ಮುಂದಾಗದಂತೆ ತನಿಖಾಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net