

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಗರಣದಲ್ಲಿ ಸಚಿವ ಭೈರತಿ ಸುರೇಶ್ ಪಾತ್ರವಿದ್ದು, ಇದಕ್ಕೆಲ್ಲ ಸರ್ಕಾರದ ಕುಮ್ಮಕ್ಕು ಇದೆ ಎಂದು ಮಾಜಿ ಶಾಸಕ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಗಂಭೀರ ಆರೋಪ ಮಾಡಿದರು.
ನಾಗರಾಜು ಎಂಬ ವ್ಯಕ್ತಿಗೆ 53 ಸೈಟ್ ನೀಡಲಾಗಿದ್ದು, ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಅಮಾಯಕರಿಗೆ ಸೈಟ್ ಇರುವುದೇ ಗೊತ್ತಿಲ್ಲ. ಚಾಮುಂಡೇಶ್ವರಿ ಸೌಹಾರ್ದ ಸಮಿತಿಯ 48 ಸೈಟ್‌ಗಳನ್ನು ವಾಪಸ್ ಪಡೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನೀಡಿದ್ದ 14 ಸೈಟ್‌ಗಳನ್ನು ಹಿಂದಕ್ಕೆ ನೀಡಿದ್ದಾರೆ. ಉಳಿದ ಸೈಟ್‌ಗಳ ವಾಪಸಾತಿ ಯಾವಾಗ? ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ರಾಜ್ಯ ಸರ್ಕಾರಕ್ಕೆ ಶಕ್ತಿ ಹಾಗೂ ಪ್ರಾಮಾಣಿಕತೆ ಇದ್ದರೆ ಮುಡಾದಿಂದ 50:50 ಅನುಪಾತದಲ್ಲಿ ಹಂಚಿಕೆ ಆಗಿರುವ 928 ನಿವೇಶನಗಳನ್ನು ವಾಪಸ್ ಪಡೆಯಬೇಕು. 2023ರ ಅಕ್ಟೋಬರ್‌ನಲ್ಲಿ 50:50 ನಿವೇಶನ ಹಂಚಿಕೆ ನಿಲ್ಲಿಸುವಂತೆ ನಗರಾಭಿವೃದ್ಧಿ ಕಾರ್ಯದರ್ಶಿ ಮುಡಾಕ್ಕೆ ಪತ್ರ ಬರೆದ ನಂತರವೇ ಹೆಚ್ಚು ನಿವೇಶನಗಳು ಹಂಚಿಕೆ ಆಗಿವೆ. ಹೀಗಾಗಿ ಈ ಎಲ್ಲವುಗಳನ್ನೂ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರ ಬಂದ ನಂತರವೇ ಇಷ್ಟೆಲ್ಲ ಅಕ್ರಮ ನಡೆದಿದೆ. ಮುಡಾದ ಹಿಂದಿನ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಒಬ್ಬರಿಗೆ ಇಷ್ಟೆಲ್ಲ ಶಕ್ತಿ ಇಲ್ಲ. ಸರ್ಕಾರವೇ ಭ್ರಷ್ಟಾಚಾರದ ಹಿಂದೆ ನಿಂತಿದೆ. ಹೀಗಾಗಿಯೇ ದಿನೇಶ್ ಹಾಗೂ ಡಿ.ಬಿ. ನಟೇಶ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ. ಹೀಗಾಗಿ ಸಿದ್ದರಾಮಯ್ಯ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದೆ ಎಂದು ದೂರಿದರು.
ಕ್ರಿಮಿನಲ್ ಕೇಸ್ ದಾಖಲಿಸಿ: ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮುಡಾದಲ್ಲಿ ನಿವೇಶನಗಳ ಅಕ್ರಮ ಹಂಚಿಕೆ ವಿಚಾರವಾಗಿ ಮುಡಾ ಪ್ರಭಾರ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಬೇಕು. ಕಡತಗಳ ನಾಪತ್ತೆ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇನ್ನೂ ಹಲವು ಅಧಿಕಾರಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಮುಡಾದಲ್ಲಿ 50:50 ಅನುಪಾತದಲ್ಲಿ ಕೇವಲ 129 ಜನರಿಗೆ ಬದಲಿ ನಿವೇಶನ ನೀಡಿದ್ದೇವೆ ಎಂದು ಸರ್ಕಾರ ವಿಧಾನಸಭೆಯಲ್ಲಿ ನನ್ನ ಪ್ರಶ್ನೆಗೆ ಉತ್ತರ ನೀಡಿದೆ. ಈ ಹಂಚಿಕೆಯಲ್ಲೂ ಲೋಪ ಕಂಡುಬಂದಿದೆ. ಸೋಮವಾರದಿಂದ ನಡೆಯಲಿರುವ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇವೆ ಎಂದರು.
ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್ ಮಾತನಾಡಿ, ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿನ ಹಿನ್ನೆಲೆಯಲ್ಲಿ ಬಿಜೆಪಿ ಸತ್ಯಶೋಧನ ಸಮಿತಿಯು ಭಾನುವಾರ ಬಳ್ಳಾರಿಗೆ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 280 ಬಾಣಂತಿಯರು ಹಾಗೂ 100 ನವಜಾತ ಶಿಶುಗಳು ಮೃತಪಟ್ಟಿವೆ. ಇದರ ಡೆಟ್ ಆಡಿಟ್ ನಡೆಸಬೇಕು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸರ್ಕಾರದ ವಿರುದ್ಧ ಬಿಜೆಪಿ ದೂರು ದಾಖಲಿಸಲಿದ್ದು, ಸದನದ ಒಳಹೊರಗೆ ಹೋರಾಟ ನಡೆಸಲಾಗುವುದು ಎಂದರು.
ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮುಖಂಡರಾದ ಕೇಬಲ್ ಮಹೇಶ್, ಮಹೇಶ್ ರಾಜೇಅರಸ್ ಇದ್ದರು.