

ಎನ್.ಆರ್.ಪುರ: ಪಟ್ಟಣದ ರಸ್ತೆ ವಿಸ್ತರಣೆಗೆ 60 ಕೋಟಿ ರೂ. ಅನುದಾನ ಮಂಜೂರಾಗಿದ್ದು ಪಟ್ಟಣದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ಹೆಸರಿಗೆ ತಾಲೂಕಾದರೂ ಪಟ್ಟಣ ಬೆಳೆದಿಲ್ಲ. ಇತಿಹಾಸ ಹೊಂದಿರುವ ಈ ಊರಿನಲ್ಲಿ ಎಲ್ಲ ಕಡೆಗಳಲ್ಲಿಯೂ ಕಿರಿದಾದ ರಸ್ತೆಗಳಿವೆ. ಪಟ್ಟಣ ಪಂಚಾಯಿತಿಯಿಂದ ಬಸ್ ನಿಲ್ದಾಣದವರೆಗೆ ಮಾತ್ರ ರಸ್ತೆ ಅಗಲೀಕರಣವಾಗಿದೆ. ಆದರೆ ಹಲವೆಡೆ ಕಿರಿದಾದ ರಸ್ತೆಗಳಿಂದಾಗಿ ಸಮಸ್ಯೆ ಕಗ್ಗಂಟಾಗಿದೆ. ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ ವಾಹನದಟ್ಟಣೆಯಿಂದಾಗಿ ಸದಾ ಟ್ರಾಫಿಕ್ ಕಿರಿಕಿರಿ. ಮುಖ್ಯರಸ್ತೆಯಲ್ಲೇ ಹೆಚ್ಚಿನ ಶಾಲಾ ವಾಹನಗಳು, ಗ್ಯಾಸ್ ಸಿಲಿಂಡರ್ ತುಂಬಿದ ಬೃಹತ್ ಲಾರಿಗಳು ಸಂಚರಿಸುತ್ತವೆ. ಅದರಲ್ಲೂ ಬೆಳಗ್ಗೆ ಶಾಲೆ ಪ್ರಾರಂಭ ಸಮಯ ಹಾಗೂ ಸಂಜೆ ಶಾಲೆ ಬಿಡುವ ವೇಳೆ ಈ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ.
ಪಟ್ಟಣದ ಮುಖ್ಯರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಹೀಗಾಗಿ ವಾಟರ್‌ಟ್ಯಾಂಕ್ ವೃತ್ತದಿಂದ ಪಪಂ ರಸ್ತೆ ಭಾಗದ ಅಂಗಡಿಗಳ ಎದುರು ಹಲವರು ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದ ಮುಖ್ಯರಸ್ತೆಯಲ್ಲಿನ ಅಂಗಡಿ, ಹೋಟೆಲ್ ವ್ಯಾಪಾರ ವಹಿವಾಟು ಕುಸಿದಿದೆ.
ರಸ್ತೆ ವಿಸ್ತರಣೆಯಿಂದ ವಾಹನ ಸಂಚಾರ ಸುಗಮವಾಗುವುದರಿಂದ ತಮ್ಮ ವ್ಯಾಪಾರ ವಹಿವಾಟು ಚುರುಕಾಗಬಹುದು ಎಂಬ ನಿರೀಕ್ಷೆ ವರ್ತಕರದ್ದು. ಇಡೀ ಪಟ್ಟಣದ ಸೌಂದರ್ಯದ ಚಿತ್ರಣವೇ ಬದಲಾಗಲಿದೆ. ರಸ್ತೆ ವಿಸ್ತರಣೆಯಿಂದ ಮುಖ್ಯರಸ್ತೆ ಅಕ್ಕಪಕ್ಕದಲ್ಲಿರುವ ಹಳೇ ಕಾಲದ ಮನೆಗಳೆಲ್ಲ ತೆರವಾಗಿ ಹೊಸ ಮನೆಗಳ ನಿರ್ಮಾಣವಾಗಲಿದೆ. ಎನ್.ಆರ್.ಪುರದ ಹಳೆ ಗತ ವೈಭವ ಮರುಕಳಿಸುತ್ತದೆ. ರಸ್ತೆ ಅಕ್ಕಪಕ್ಕ ಇರುವವರಿಗೆ ಒತ್ತುವರಿ ತೆರವು ಸಮಸ್ಯೆ ಇಲ್ಲ. ರಸ್ತೆ ಮಾರ್ಜಿನ್ ಬಿಟ್ಟು ಹಿಂದಕ್ಕೆ ಕಟ್ಟಿ ಕೊಳ್ಳುವಷ್ಟು ಜಾಗ ಎಲ್ಲರೂ ಹೊಂದಿದ್ದಾರೆ. ಕೆಲವರು ರಸ್ತೆ ಮಾರ್ಜಿನ್ ಬಿಟ್ಟು ಮುಂದೆ ಪಾಳು ಬಿದ್ದ ಮನೆಯಿಟ್ಟುಕೊಂಡು ಹಿಂದೆ ಹೊಸ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ರಸ್ತೆ ಅಗಲೀಕರಣವಾದರೆ ಮುಂಭಾಗದ ಹಳೇ ಮನೆ ತೆರವು ಮಾಡುತ್ತಾರೆ.