ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯರನ್ನೇ ಮುಂದುವರಿಸಲು ಒತ್ತಾಯ

11
Published on

ಸಿದ್ದರಾಮಯ್ಯ ಅವರನ್ನೇ ಐದು ವರ್ಷವೂ ಮುಖ್ಯಮಂತ್ರಿ ಎಂದು ಘೋಷಿಸಬೇಕೆಂದು ಒತ್ತಾಯಿಸಿ ಅಹಿಂದ ಸಂಘಟನೆಗಳು ನಗರದ ರಾಮಸ್ವಾಮಿ ವೃತ್ತದಲ್ಲಿ ಪತ್ರ ಚಳವಳಿ ನಡೆಸಿತು.

ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಡೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾರಣವಾಯಿತು. ಈ ದೊಡ್ಡ ಮಟ್ಟದ ಗೆಲುವಿಗೆ ಸಿದ್ದರಾಮಯ್ಯರ ನಾಯಕತ್ವ ಹಾಗೂ ಅಹಿಂದ ಸಮುದಾಯಗಳು ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿದ್ದು ಕಾರಣವಾಯಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ನೆಲೆ ತುಂಬ ಭದ್ರವಾಗಿರುವುದಕ್ಕೆ ಮೂಲ ಕಾರಣ ಸಿದ್ದರಾಮಯ್ಯ ಅವರ ಆಡಳಿತ, ಜನಪರ ಗ್ಯಾರಂಟಿ ಯೋಜನೆಗಳ ನಿರ್ವಹಣೆ, ಜತೆಗೆ ಅಹಿಂದ ಸಮುದಾಯಗಳ ಮೇಲೆ ಅವರು ಇಟ್ಟಿರುವ ಪ್ರೀತಿ, ಕಾಳಜಿ, ಸಾಮಾಜಿಕ ನ್ಯಾಯ ಪರ ಸಿದ್ಧಾಂತ ಕಾರಣ. ಹೀಗಾಗಿ ಅವರನ್ನೇ ಐದು ವರ್ಷವೂ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಅವರನ್ನು ಎಲ್ಲ ಶಾಸಕರು ಸೇರಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ ಹೆಚ್ಚು ಅಪಪ್ರಚಾರ ಮತ್ತು ರಾಜಕೀಯ ಮಾಡುತ್ತಿವೆ. ಮುಖ್ಯಮಂತ್ರಿಗಳನ್ನು ಬದಲಾಯಿಸುತ್ತಾರೆ ಎಂಬ ಹೇಳಿಕೆಗಳನ್ನು ನೀಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಇದಕ್ಕೆ ಕೆಲವು ಕಾಂಗ್ರೆಸ್ ನಾಯಕರು ಕೂಡ ಧ್ವನಿಯಾಗಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಏಳಿಗೆಗೆ ತೊಡಕಾಗಬಹುದು ಎಂದರು.

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸುತ್ತಾರೆ ಎಂಬ ಅಪಪ್ರಚಾರ ಅಹಿಂದ ಸಮುದಾಯಗಳಿಗೆ ಸಹಿಸಲು ಅಸಾಧ್ಯ. ಹೀಗಾಗಿ ಈ ಕೂಡಲೇ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ ಮಧ್ಯಪ್ರವೇಶಿಸಿ ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ ಎಂದು ಘೋಷಿಸಿ ಎಲ್ಲ ಗೊಂದಲಗಳಿಗೂ ತೆರೆ ಎಳೆಯಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಎಚ್.ಎಸ್.ಪ್ರಕಾಶ್, ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ರವಿನಂದನ್, ಜಿಲ್ಲಾ ಉಪ್ಪಾರರ ಸಂಘದ ಅಧ್ಯಕ್ಷ ಯೋಗೇಶ್ ಉಪ್ಪಾರ್, ದಲಿತ ಮಹಾಸಭಾದ ಅಧ್ಯಕ್ಷ ರಾಜೇಶ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ದೇವಗಳ್ಳಿ ಸೋಮಶೇಖರ್, ರಾಜಶೇಖರ್, ಎಫ್.ಎಂ.ಕಲೀಂ, ರಹೀಮ್ ಖಾನ್, ಮಹಮದ್ ಆಲಿ, ಲೋಕೇಶ್ ಕುಮಾರ್, ಹರೀಶ್ ಮೊಗಣ್ಣ, ಮಂಜುಳಾ, ಮಂಜುನಾಥ್, ಛಾಯಾ, ಅನಿಲ್, ನಿಂಗರಾಜು, ನಾರಾಯಣ್, ರವಿ, ನಜರ್‌ಬಾದ್, ದಿನೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net