

ಚಿತ್ರದುರ್ಗ: ಕೇಂದ್ರ ಸರ್ಕಾರ 2023-24ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ಘೋಷಿಸಿತ್ತು. ಅಂದು ರಾಜ್ಯದ ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಯಿ ಅವರು ಇದನ್ನು ಪುನರುಚ್ಚರಿಸಿ, ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವುದಾಗಿ ಹೇಳಿದ್ದರು. ಆದರೆ, ಬಿಜೆಪಿಗರಿಗೆ ಒಂದು ರೂಪಾಯಿಯೂ ತರಲಾಗುತ್ತಿಲ್ಲ. ಮಿಸ್ಟರ್ ಕಾರಜೋಳ್ ನಿಮಗೆ ಕಾಳಜಿ ಇದ್ದರೆ, ಅನುದಾನ ತನ್ನಿ ಎಂದು ಸಿಎಂ ಸಿದ್ದರಾಮಯ್ಯ ಛೇಡಿಸಿದರು.
ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಗಿನ ಸಮರ್ಪಣೆ ನಂತರದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದಕ್ಕೆ ಅನುದಾನ ಹಾಗೂ ನಬಾರ್ಡ್‌ನಲ್ಲಿ ರಾಜ್ಯಕ್ಕೆ ಕಡಿತವಾಗಿರುವ ಸಾಲದ ಮೊತ್ತ ನೀಡುವಂತೆ ನಾನು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅನೇಕ ಬಾರಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಷಾ, ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದೇವೆ. ಗುರುವಾರ ಕೂಡ ಪತ್ರ ಬರೆಯಲಿದ್ದೇವೆ ಎಂದರು.
ಜನಪರ ಕಾಳಜಿ ರಾಜಮನೆತನದಲ್ಲಿತ್ತು: ವಾಣಿ ವಿಲಾಸ ಸಾಗರ ಕರ್ನಾಟಕದ ಮೊದಲ ಜಲಾಶಯವಾಗಿದ್ದು, ಕನ್ನಂಬಾಡಿ ಅಣೆಕಟ್ಟೆ ಕಟ್ಟಲು ಇದು ಪ್ರೇರಣೆ. ಇಂದು ಈ ಜಲಾಶಯ ನಿರ್ಮಿಸಲು ಸಾವಿರಾರು ಕೋಟಿ ಖರ್ಚಾಗುತ್ತಿತ್ತು. ಆದರೆ, ಮೈಸೂರು ರಾಜಮನೆತನ ಬರಪೀಡಿತ ಬಯಲುಸೀಮೆ ಜನರಿಗಾಗಿ ಆಗಿನ ಕಾಲದಲ್ಲಿ 45ಲಕ್ಷ ರೂ. ಖರ್ಚು ಮಾಡಿ ಇದನ್ನು ಕಟ್ಟಿಸಿದರು. ನಿರ್ಮಾಣ ವೇಳೆ ಆರ್ಥಿಕ ಸಂಕಷ್ಟ ಸರಿದೂಗಿಸಲು ಕೆಂಪನಂಜಮ್ಮಣಿ ಮಹಾತಾಯಿ ತಮ್ಮ ಆಭರಣ ಅಡವಿಟ್ಟರು. ಜನಪರ ಕಾಳಜಿ ಅವರಲ್ಲಿತ್ತು ಎಂದು ಸ್ಮರಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಡಿ.ಸುಧಾಕರ್, ಮಾಜಿ ಸಚಿವ ಎಚ್.ಆಂಜನೇಯ, ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ, ಎಂಎಲ್ಸಿ ಡಿ.ಟಿ.ಶ್ರೀನಿವಾಸ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಇತರರಿದ್ದರು.