

ಮಾಹಿತಿಯು ವ್ಯಾಪಕವಾಗಿ ವಿವಿಧ ಮಾಧ್ಯಮಗಳಿಂದ ಪಸರಿಸಲ್ಪಡುತ್ತದೆ. ಆದರೆ ನಿಜವಾದ ಜ್ಞಾನ ಸಂಪಾದನೆಗೆ, ವಿಶ್ಲೇಷಣೆ, ತಿಳುವಳಿಕೆ ಮತ್ತು ಸಕ್ರಿಯವಾಗಿ ತೊಡಗಿಕೊಳ್ಳುವಿಕೆಯ ಅಗತ್ಯವಿರುತ್ತದೆ ಎಂದು ಇನ್ಫೋಸಿಸ್ ಲಿಮಿಟೆಡ್‌ನ ಸಹ ಉಪಾಧ್ಯಕ್ಷ ಡಾ. ನವೀನ್ ಪಟೇಲ್ ಹೇಳಿದರು.
ಬೋಗಾದಿಯಲ್ಲಿರುವ ಅಮೃತ ವಿಶ್ವವಿದ್ಯಾಪೀಠಂನಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬುಧವಾರ ಏರ್ಪಡಿಸಲಾಗಿದ್ದ ಬ್ರೈನ್ ಬೈಟ್ಸ್-2024 ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಾಹಿತಿ ಮತ್ತು ಜ್ಞಾನದ ಬಗ್ಗೆ ಮಾತನಾಡಿದ ಅವರು, ಕಂಠಪಾಠವನ್ನು ಮೀರಿದ ವಿಮರ್ಶಾತ್ಮಕ ಚಿಂತನೆಯು ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗುತ್ತದೆ ಎಂದರು. ನಿರಂತರ ಕಲಿಕೆಯು ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಕಲಿಕೆಯನ್ನು ಜೀವನಪರ್ಯಂತದ ಪ್ರಯಾಣವೆಂದು ಪರಿಗಣಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪದವಿ ಪೂರ್ವ ವಿದ್ಯಾರ್ಥಿಗಳ ಏಕತಾನದ ಹಾಗೂ ಒತ್ತಡದ ಅಭ್ಯಾಸದ ನಡುವೆ ಒಂದು ಮಾಹಿತಿಯುಕ್ತ ಬಿಡುವನ್ನು ಕಲ್ಪಿಸಿ ಉತ್ತೇಜನ ನೀಡುವ ಉದ್ದೇಶದಿಂದ ಈ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ರಸಪ್ರಶ್ನೆ ಸ್ಪರ್ಧೆಯು ಲಿಖಿತ, ಆನ್‌ಲೈನ್, ಕನೆಕ್ಟ್-ದಿ-ಡಾಟ್ಸ್, ಆಡಿಯೋ-ವಿಶ್ಯುವಲ್ ಹಾಗೂ ರ‌್ಯಾಪಿಡ್-ಪೈಯರ್ ಎಂಬ 5 ಸುತ್ತುಗಳನ್ನು ಒಳಗೊಂಡಿತ್ತು.
ಮಾನಸರೋವರ ಪುಷ್ಕರಿಣಿ ವಿದ್ಯಾಶ್ರಮದ ಅನುಷಾ ಷಡಕ್ಷರಿ ಮತ್ತು ದಿಶಾ ಜಿ.ಪೂಜಾರ್(ಪ್ರಥಮ),ವಿಜಯ ವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎಸ್.ಎಂ.ಮನೋಜ್ ಮತ್ತು ಎಂ.ಅನಿರುದ್ಧ್(ದ್ವಿತೀಯ), ಶ್ರೀ ವಿವೇಕ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಎಚ್.ಎಸ್.ಸುಕೃತ್ ಮತ್ತು ರಿಶಿತ್ ರಾವ್(ತೃತೀಯ) ಬಹುಮಾನ ಪಡೆದರು.
ವಿಜೇತರಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ನೀಡಿ ಪ್ರೋತ್ಸಾಹಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯ ಜೊತೆಗೆ ಟ್ರೆಷರ್ ಹಂಟ್ ಸ್ಪರ್ಧೆಯನ್ನು ಕೂಡಾ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್‌ನ ನಿರ್ದೇಶಕರಾದ ಬ್ರಹ್ಮಚಾರಿ ಅನಂತಾನಂದ ಚೈತನ್ಯ, ಸಂಚಾಲಕರಾದ ಬ್ರಹ್ಮಚಾರಿ ಮುಕ್ತಿದಾಮೃತ ಚೈತನ್ಯ, ಅಸೋಸಿಯೇಟ್ ಡೀನ್ ಡಾ. ಶೇಖರ್ ಬಾಬು, ಶೈಕ್ಷಣಿಕ ಸಂಯೋಜಕಿ ಡಾ.ರೇಖಾ ಭಟ್ ಇದ್ದರು.