

ಪವಿತ್ರಾ ಕುಂದಾಪುರ ಬೆಂಗಳೂರು
ಕರ್ನಾಟಕ ಮಾಹಿತಿ ಆಯೋಗದಲ್ಲಿ ಖಾಲಿ ಉಳಿದಿರುವ ಆರು ಮಾಹಿತಿ ಹಕ್ಕು ಆಯುಕ್ತರು ಹಾಗೂ ಮುಖ್ಯ ಆಯುಕ್ತ ಹುದ್ದೆಗಳ ನೇಮಕಕ್ಕೆ ಭಾರಿ ಲಾಬಿ ನಡೆಯುತ್ತಿರುವ ಗಂಭೀರ ಚರ್ಚೆಯ ಬೆನ್ನಲ್ಲೇ ಖಾಲಿ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕವಾಗಿ ಆದೇಶಿಸಿದೆ.
ಆಯೋಗದಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿಗೊಳಿಸುವ ನಿಟ್ಟಿನಲ್ಲಿ ನೇಮಕಾತಿ ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ಸೂಚಿಸಿದೆ.
ಮಾಹಿತಿ ಹಕ್ಕು ಆಯೋಗವು 2015ರ ಜು.7ರಂದು 10 ಸಾವಿರ ರೂ. ದಂಡ ವಿಧಿಸಿ ಹೊರಡಿಸಿದ್ದ ಆದೇಶವನ್ನು ರದ್ದು ಕೋರಿ ಬೆಂಗಳೂರಿನ ಕೋರಮಂಗಲದ ವಾಣಿಜ್ಯ ತೆರಿಗೆಯ ಜಂಟಿ ಆಯುಕ್ತರಾದ ಸಿ.ಪುಷ್ಪಲತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೊವೀಂದ್ ರಾಜ್ ಅವರ ಏಕಸದಸ್ಯ ಪೀಠ ಮಾನ್ಯ ಮಾಡಿದೆ.
ದಂಡದ ಆದೇಶ ಪ್ರಶ್ನಿಸಿ ಆಯೋಗಕ್ಕೆ ಸಲ್ಲಿಸಿದ್ದ ಮೇಲ್ಮನವಿ 10 ವರ್ಷಗಳಿಂದ ಬಾಕಿ ಉಳಿದಿರುವ ಬಗ್ಗೆ ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಪೀಠ, ಆಯೋಗದಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿಗೊಳಿಸುವ ನಿಟ್ಟಿನಲ್ಲಿ ಖಾಲಿ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು ಎಂದು ಆದೇಶಿಸಿದೆ.
10 ವರ್ಷವಾದರು ಇತ್ಯರ್ಥವಾಗಿಲ್ಲ!
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಪ್ರಕರಣ ಸಂಬಂಧ ಅರ್ಜಿದಾರರ ಅಹವಾಲು ಆಲಿಸದೆ ಆಯೋಗ ದಂಡ ವಿಧಿಸಿದೆ. ಇದು ಕಾನೂನಿಗೆ ವಿರುದ್ಧವಾದ ನಡೆ. ಅಲ್ಲದೆ ಈ ಬಗ್ಗೆ ಪ್ರಶ್ನಿಸಿ ಆಯೋಗಕ್ಕೆ ಹತ್ತು ವರ್ಷದ ಹಿಂದೆ ಸಲ್ಲಿಸಲಾದ ಮೇಲ್ಮನವಿ ಅರ್ಜಿ ವಿಲೇವಾರಿಯಾಗದೆ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಆದೇಶ ರದ್ದುಗೊಳಿಸುವಂತೆ ಹೈಕೋರ್ಟ್ ಕದ ತಟ್ಟಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಹೈಕೋರ್ಟ್ ಆದೇಶವೇನು?
ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಲು ವಿಲವಾದ ಹಿನ್ನೆಲೆಯಲ್ಲಿ ಮಾಹಿತಿ ಆಯೋಗ 10 ಸಾವಿರ ರೂ ದಂಡ ವಿಧಿಸಿ ಹೊರಡಿಸಿದ ಆದೇಶ ರದ್ದುಗೊಳಿಸಿದೆ. ಅರ್ಜಿ ವಿಲೇವಾರಿ ಮಾಡಿದ್ದರು ಸಹ 2025ರ ಜ.30ರಂದು ಮರುಪಟ್ಟಿಯಲ್ಲಿ ದಾಖಲಿಸಬೇಕು. ಆಯೋಗವು ಹೊಸದಾಗಿ ಅರ್ಜಿಯನ್ನು ಪರಿಗಣಿಸಬೇಕು. ಪ್ರಕರಣ ಸಂಬಂಧ ಆಯೋಗವು ಅರ್ಜಿದಾರರು ಮತ್ತು ಪ್ರತಿವಾದಿಗಳಿಗೆ ಹೊಸದಾಗಿ ನೋಟಿಸ್ ಜಾರಿಗೊಳಿಸಬೇಕು ಎಂದು ನ್ಯಾಯಪೀಠ ಸೂಚನೆ ಕೊಟ್ಟಿದೆ.
ಪ್ರಕರಣವೇನು?
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಜಂಟಿ ಆಯುಕ್ತೆ ಸಿ.ಪುಷ್ಪಲತಾ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಹೊಸದಾಗಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯಾಗಿ ಈ ಹಿಂದೆ ಪಿಎಸ್‌ಐ ಆಗಿದ್ದ ಎಸ್. ಬಸವಣ್ಣ ಎಂಬುವರು ನೇಮಕಗೊಂಡರು.
ಈ ಬಗ್ಗೆ ಕೆ.ಎಸ್ ರವಿಕುಮಾರ್ ಎಂಬುವರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಎಸ್. ಬಸವಣ್ಣ ಅವರ ನೇಮಕಾತಿ ಹಾಗೂ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣದ ದೂರಿನ ಬಗ್ಗೆ ಇಲಾಖೆ ಕೈಗೊಂಡಿರುವ ಕ್ರಮದ ವರದಿ ನೀಡುವಂತೆ ಕೇಳಿದ್ದರು. ಎರಡು ಬಾರಿ ಮೇಲ್ಮನವಿ ಸಲ್ಲಿಸಿದ್ದರು ಸೂಕ್ತ ಮಾಹಿತಿ ನೀಡುವಲ್ಲಿ ಜಂಟಿ ಆಯುಕರು ವಿಲವಾದ ಹಿನ್ನೆಲೆಯಲ್ಲಿ ಆಯೋಗ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತ್ತು. ತಮ್ಮ ವಾದ ಆಲಿಸದೆಯೇ ದಂಡ ವಿಧಿಸಲಾಗಿದೆ ಎಂದು ಆಕ್ಷೇಪಿಸಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ದಶಕ ಕಳೆದರೂ ಅರ್ಜಿ ವಿಲೇವಾರಿಯಾಗದೆ ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಪುಷ್ಪಲತಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಒಂದೇ ದಿನ 408 ಅರ್ಜಿ ವಿಚಾರಣೆ!
ಮಾಹಿತಿ ಆಯೋಗದ ಮುಖ್ಯ ಆಯುಕ್ತ ಎಚ್.ಸಿ.ಸತ್ಯನ್, ಒಂದೇ ದಿನ ಬರೋಬ್ಬರಿ 408 ಅರ್ಜಿಗಳನ್ನು ವಿಚಾರಣೆ ನಡೆಸಿ ವಿಲೇವಾರಿ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಇದರಲ್ಲಿ ಒಬ್ಬರೇ ಅರ್ಜಿದಾರರಿಗೆ ಸಂಬಂಧಿಸಿದ ಒಂದೇ ಕಚೇರಿಗೆ ಸಲ್ಲಿಸಿದ ಅಂದಾಜು 390 ಪ್ರಕರಣಗಳ ವಿಚಾರಣೆ ನಡೆಸಿ ಮುಕ್ತಾಯಗೊಳಿಸಿರುವುದು ಇತಿಹಾಸದಲ್ಲಿ ಇದೇ ಮೊದಲಾಗಿದೆ. ಬೆಂಗಳೂರಿನ ನಾಗರಿಕರೊಬ್ಬರು ದಾವಣಗೆರೆ ಉಪನೋಂದಣಾಧಿಕಾರಿಗೆ 390 ಅರ್ಜಿಗಳನ್ನು ಸಲ್ಲಿಸಿ ವಿವಿಧ ನೋಂದಾಯಿತ ದಾಖಲೆಗಳ ಮಾಹಿತಿ ಕೇಳಿದ್ದರು. ಇದಲ್ಲದೆ ದಾವಣಗೆರೆ ತಹಸೀಲ್ದಾರ್‌ಗೂ 18 ಅರ್ಜಿ ಸಲ್ಲಿಸಿ ಮಾಹಿತಿ ಕೋರಿದ್ದರು. 30 ದಿನದಲ್ಲಿ ಮಾಹಿತಿ ಸಿಗದಿದ್ದರಿಂದ ಆಯೋಗಕ್ಕೆ ದೂರು ಸಲ್ಲಿಸಿದ್ದರು. 2024 ಅ.9ರಂದು ಎಲ್ಲವನ್ನೂ ವಿಚಾರಣೆ ನಡೆಸಿ ಸತ್ಯನ್ ಇತ್ಯರ್ಥಪಡಿಸಿದ್ದಾರೆ.