ಮಾವು, ಹೂವು ಬೆಳೆದವರಿಗೆ ನೋವು

2MDG1 A
Published on


ಮುಂಡರಗಿ: ಕರೊನಾ 2ನೇ ಅಲೆಯ ನೇರ ಪರಿಣಾಮ ತೋಟಗಾರಿಕೆ ರೈತರ ಮೇಲೆ ಬೀರಿದೆ. ಕರ್ಫ್ಯೂ ಜಾರಿಯಾಗಿದ್ದರಿಂದ ಹಣ್ಣು, ಹೂ, ತರಕಾರಿ ಬೆಳೆದ ರೈತರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.
ತಾಲೂಕಿನಲ್ಲಿ ಹೂವು, ಹಣ್ಣು, ತರಕಾರಿ ಖರೀದಿಸಲು ಖರೀದಿದಾರರು, ವ್ಯಾಪಾರಸ್ಥರು ಬರುತ್ತಿಲ್ಲ. ರೈತರೇ ಮಾರಾಟ ಮಾಡಲು ಮುಂದಾದರೆ ಉತ್ತಮ ಬೆಲೆ ಸಿಗುತ್ತಿಲ್ಲ. ಒಂದು ವೇಳೆ ಮಾರಾಟವಾದರೂ ಕಡಿಮೆ ದರಕ್ಕೆ ಮಾರಾಟವಾಗುತ್ತಿದೆ. ಹೀಗಾಗಿ ತೋಟಗಾರಿಕೆ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ತಾಲೂಕಿನಲ್ಲಿ 556.34 ಹೆಕ್ಟೇರ್​ನಲ್ಲಿ ಮಾವು, ಬಾಳೆ, ಚಿಕ್ಕು, ಪಪ್ಪಾಯ, ದಾಳಿಂಬೆ, ಪೇರಲ, ಮೊದಲಾದ ಹಣ್ಣುಗಳನ್ನು ಬೆಳೆಯಲಾಗಿದೆ. 40.01 ಹೆಕ್ಟೇರ್ ಪ್ರದೇಶದಲ್ಲಿ ಸೇವಂತಿ, ಸುಗಂಧರಾಜ, ಕನಕಾಂಬರ, ಮಲ್ಲಿಗೆ, ಮಾರಿಗೋಲ್ಡ್, ಗುಲಾಬಿ ಮತ್ತಿತರ ಹೂವುಗಳನ್ನು ಬೆಳೆಯಲಾಗಿದೆ. 513.26 ಹೆಕ್ಟೇರ್​ನಲ್ಲಿ ವಿವಿಧ ಬಗೆಯ ತರಕಾರಿ ಬೆಳೆಯಲಾಗಿದೆ. ಈ ಬೆಳೆಗಳ ಪೈಕಿ ಮೇ ಮತ್ತು ಜೂನ್ ತಿಂಗಳಲ್ಲಿ 470 ಹೆಕ್ಟೇರ್​ನಲ್ಲಿ 700 ಟನ್​ನಷ್ಟು ವಿವಿಧ ಹಣ್ಣು, 233 ಹೆಕ್ಟೇರ್​ನಲ್ಲಿ 1718 ಟನ್ ವಿವಿಧ ತರಕಾರಿ, 22 ಹೆಕ್ಟೇರ್​ನಲ್ಲಿ 178 ಟನ್ ವಿವಿಧ ಬಗೆಯ ಹೂವು ಉತ್ಪಾದನೆಯಾಗಲಿದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.
ಮುಂಡವಾಡ ಗ್ರಾಮದ ರೈತ ರಮೇಶ ಕಳಕರಡ್ಡಿ ಅವರ 8 ಎಕರೆ ಮಾವು ತೋಟದಲ್ಲಿ ಅಪಾರ ಪ್ರಮಾಣದಲ್ಲಿ ಮಾವು ಬೆಳೆಯಲಾಗಿದೆ. ಮಾವಿನ ಸೀಜನ್​ನಲ್ಲಿ ಪ್ರತಿದಿನ ಕನಿಷ್ಠ 7ರಿಂದ 8 ಕ್ವಿಂಟಾಲ್ ಮಾವು ಮಾರಾಟವಾಗುತ್ತಿತ್ತು. ಈಗ 1ರಿಂದ 2 ಕ್ವಿಂಟಾಲ್ ಮಾರಾಟವಾಗುತ್ತಿಲ್ಲ. ಹತ್ತು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಗೆ ಸುಮಾರು 2ಟನ್​ನಷ್ಟು ಮಾವು ಹಾನಿಯಾಗಿದೆ. ಈಗ ಕರೊನಾ ಕರಿಛಾಯೆ ಆವರಿಸಿದ್ದು ಮಾವು ಖರೀದಿಗೆ ವ್ಯಾಪಾರಸ್ಥರು ಮತ್ತು ಗ್ರಾಹಕರು ಬರುತ್ತಿಲ್ಲ. ಹೀಗಾಗಿ ತೋಟದಲ್ಲಿ ಮಾವು ಕೊಳೆಯುವಂತಾಗಿದೆ. ಇದೇ ರೀತಿಯಲ್ಲಿ ಮಾವು, ಬಾಳೆ, ಚಿಕ್ಕು ಮೊದಲಾದ ಹಣ್ಣು ಬೆಳೆದ ರೈತರು ಹಾಗೂ ತರಕಾರಿ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಗದೆ ಸಂಕಷ್ಟದಲ್ಲಿ ದಿನಕಳೆಯುವಂತಾಗಿದೆ.

ಹೂವು ಹರಗಿದ ರೈತ: ಕದಾಂಪೂರ ಗ್ರಾಮದ ರೈತ ಬಸವರಡ್ಡಿ ನಾಗನೂರ ಅವರು ತಮ್ಮ 1.5 ಎಕರೆ ಜಮೀನಿಲ್ಲಿ ವಿವಿಧ ಜಾತಿಯ ಹೂವುಗಳನ್ನು ಬೆಳೆದಿದ್ದರು. ಇನ್ನೂ ಮೂರು ತಿಂಗಳವರೆಗೆ ಒಳ್ಳೆಯ ಬೆಲೆ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಕಳೆದ ಅಮಾವಾಸೆ ದಿನದಂದು ಸುಮಾರು 30 ಸಾವಿರದಷ್ಟು ಹೂವು ಮಾರಾಟ ಮಾಡಿದ್ದರು. ಆದರೆ, ಈಗ ಕರೊನಾ ಅಲೆಯಿಂದಾಗಿ ಹತ್ತು ಹದಿನೈದು ದಿನಗಳಿಂದ ಹೂವು ಮಾರಾಟವಾಗುತ್ತಿಲ್ಲ. ಹೂವಿಗೆ ಕ್ರಿಮಿನಾಶಕ ಔಷಧ ಸೇರಿದಂತೆ ನಿರ್ವಹಣೆಗೆ ಪ್ರತಿದಿನ ಸಾವಿರಾರು ರೂಪಾಯಿ ಖರ್ಚು ಬರುತ್ತದೆ. ನಿರ್ವಹಣೆ ಮಾಡದೆ ಗಿಡದಲ್ಲೇ ಹೂಗಳು ಬಾಡುವ ಸ್ಥಿತಿಗೆ ಬಂದಿವೆ. ಆದಾಯವಿಲ್ಲದೆ ಖರ್ಚು ಮಾಡುವುದಕ್ಕೆ ಸಾಧ್ಯವಿಲ್ಲದೆ ಬೇಸತ್ತು ರೈತ ಬಸವರಡ್ಡಿ ನಾಗನೂರ ತಮ್ಮ ತೋಟದಲ್ಲಿ ಬೆಳೆದಿದ್ದ ಹೂವು ಬೆಳೆಯನ್ನು ಸಂಪೂರ್ಣವಾಗಿ ಟ್ರ್ಯಾಕ್ಟರ್​ನಿಂದ ಹರಗಿ ನಾಶ ಪಡಿಸಿದ್ದಾರೆ. ಕರೊನಾದಿಂದಾಗಿ ಹೂವು ಬೆಳೆಗಾರರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗಾಯದ ಮೇಲೆ ಬರೆ: ಕಳೆದ ಹತ್ತು ದಿನಗಳ ಹಿಂದೆ ಸುರಿದ ಭಾರಿ ಬಿರುಗಾಳಿ, ಮಳೆಗೆ ಸುಮಾರು 30ಕ್ಕೂ ಹೆಚ್ಚು ಹೆಕ್ಟೇರ್ ಬಾಳೆ, ಮಾವು ಮೊದಲಾದ ಬೆಳೆ ಹಾನಿಯಾಗಿದೆ. ಮತ್ತೊಂದೆಡೆ ಕೈಗೆ ಬಂದ ಬೆಳೆ ಉತ್ತಮ ಬೆಲೆಗೆ ಮಾರಾಟವಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದು, ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಜನತಾ ಕರ್ಫ್ಯೂ ಜಾರಿಯಾಗಿದ್ದರಿಂದ ಹೂವು ಕೇಳುವವರೇ ಇಲ್ಲದಂತಾಗಿದೆ. ಗಿಡದಲ್ಲೇ ಹೂವುಗಳು ಬಾಡುತ್ತಿವೆ. ಆದಾಯವಿಲ್ಲದೆ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಹೀಗಾಗಿ ಬೆಳೆಯನ್ನು ಹರಗಿ ನಾಶ ಮಾಡಲಾಗಿದೆ. ಹೂವು ಬೆಳೆಗಾರರ ಪರಿಸ್ಥಿತಿ ಸಂಕಷ್ಟದಲ್ಲಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಸೂಕ್ತ ಪರಿಹಾರ ನೆರವು ನೀಡಬೇಕು. | ಬಸವರಡ್ಡಿ ನಾಗನೂರ, ಹೂ ಬೆಳೆಗಾರರು ಕದಾಂಪೂರ

ಮಾವು ಖರೀದಿಗೆ ವ್ಯಾಪಾರಸ್ಥರು, ಗ್ರಾಹಕರು ಬರುತ್ತಿಲ್ಲ. ಸ್ವತಃ ನಾವೇ ಮಾರಾಟ ಮಾಡಲು ಹೋದರೆ ದಿನಕ್ಕೆ ಕೇವಲ 1 ಕ್ವಿಂಟಾಲ್​ನಷ್ಟು ಮಾವು ಮಾರಾಟವಾಗುತ್ತಿಲ್ಲ. ತೋಟದಲ್ಲಿ ಮಾವು ಉಳಿದು ಕೊಳೆಯುತ್ತಿದೆ. | ರಮೇಶ ಕಳಕರಡ್ಡಿ, ಮಾವು ಬೆಳೆದ ರೈತ.------------ಕರೊನಾದಿಂದ ರೈತರಿಗೆ ತುಂಬಾ ಹಾನಿಯಾಗುತ್ತಿದೆ. ಹೂವು, ಹಣ್ಣು, ತರಕಾರಿ ಸೇರಿದಂತೆ ಮೊದಲಾದ ಬೆಳೆಗಳು ಸರಿಯಾಗಿ ಮಾರಾಟವಾಗುತ್ತಿಲ್ಲ. ತೋಟಗಾರಿಕೆ ಬೆಳೆಗಳು ಹಾನಿಯಾಗಿ ಸಂಕಷ್ಟ ಸ್ಥಿತಿ ಎದುರಿಸುವಂತಾಗಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ರೈತರ ನೆರವಿಗೆ ಬರಬೇಕು.| ಶಿವಾನಂದ ಇಟಗಿ, ರೈತ ಸಂಘ ಜಿಲ್ಲಾಧ್ಯಕ್ಷ-------------ರೈತರು ಮತ್ತು ಖರೀದಿದಾರರನ್ನು ಸಂರ್ಪಸಿ ಉತ್ಪನ್ನವನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಬಿರುಗಾಳಿ ಮಳೆಗೆ ಹಾನಿಯಾದ ಬೆಳೆಯ ಸಮೀಕ್ಷೆ ಮಾಡಲಾಗಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು.| ಬಸವರಾಜ ಬೇನಾಳ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಮುಂಡರಗಿ-----------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net