ಮಾಳಿ ನಿಗಮ-ಮಂಡಳಿ ರಚಿಸಲಿ

6Athani1
Published on

ಅಥಣಿ: ಮಾಳಿ ಸಮುದಾಯಕ್ಕೆ ಸರ್ಕಾರ ಶೀಘ್ರ ನಿಗಮ-ಮಂಡಳಿ ರಚಿಸಬೇಕು. ಇಲ್ಲವಾದರೆ, ಚಳಿಗಾಲ ಅಧಿವೇಶನದಲ್ಲಿ ಆಮರಣ ಉಪವಾಸ ಹಮ್ಮಿಕೊಳ್ಳಲಾಗುವುದು ಎಂದು ಮಾಳಿ-ಮಾಲಗಾರ ಸಮುದಾಯದ ಅಧ್ಯಕ್ಷ ಡಾ.ಸಿ.ಬಿ.ಕುಲಗುಡೆ ಹೇಳಿದರು.

ಪಟ್ಟಣದ ಗಚ್ಚಿನಮಠದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಮಾಳಿ-ಮಾಲಗಾರ ಸಮುದಾಯದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮುದಾಯದ ಬಗ್ಗೆ ಧ್ವನಿಯಾಗಿ ಮಾತನಾಡಲು ಸಮುದಾಯದ ಒಬ್ಬ ಜನಪ್ರತಿನಿಧಿ ಇಲ್ಲ. ಹೀಗಾಗಿ ಸರ್ಕಾರದ ಸೌಲಭ್ಯಗಳಿಂದ ಸಮುದಾಯ ವಂಚಿತವಾಗಿದೆ. ಸಮುದಾಯದವರು ಒಗ್ಗಟ್ಟಿನಿಂದ ಹೋರಾಟಕ್ಕೆ ಇಳಿಯಬೇಕು. ಅಂದಾಗ ಸಮುದಾಯ ಸದೃಢ, ಸಮೃದ್ಧವಾಗಿ ಬೆಳೆಯಲು ಸಾಧ್ಯ. ಶಾಸಕ ಲಕ್ಷ್ಮಣ ಸವದಿ ಅವರು ಸಮುದಾಯದ ಪರ ಸರ್ಕಾರ ಮಟ್ಟದಲ್ಲಿ ಧ್ವನಿ ಎತ್ತುವಂತೆ ಸಮುದಾಯದ ಜನರು ವಿನಂತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ ಮಾತನಾಡಿ, ಪ್ರತಿವರ್ಷ ೫ಲಕ್ಷ ರೂ. ವರೆಗೆ ಬಡವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳ ಶುಲ್ಕ ಭರಿಸುವ ಕಾರ್ಯ ಮಾಡುತ್ತಿದ್ದೇನೆ. ಬಡ ವಿದ್ಯಾರ್ಥಿಗಳಿಗೆ ಡಿಸಿಸಿ ಬ್ಯಾಂಕಿನಿಂದ ಕಡಿಮೆ ಬಡ್ಡಿದರದಲ್ಲಿ ಉನ್ನತ ವಾಸಂಗಕ್ಕೆ ಹಣಕಾಸಿನ ನೆರವು ನೀಡಬೇಕೆಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಲ್ಲಿ ವಿನಂತಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಮಾತನಾಡಿ, ಸಮುದಾಯ ಸಂಘಟನೆಗೆ ಎಲ್ಲರೂ ಪಕ್ಷಾತೀತವಾಗಿ ಮುಂದಾಗಬೇಕು. ಅಂದಾಗ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಶಿಕ್ಷಣದಿಂದ ಸಮಾಜ ಕಟ್ಟಿರುವ ಮಹಾತ್ಮ ಜ್ಯೋತಿಬಾ -ಫುಲೆ, ಸಾವಿತ್ರಿಬಾಯಿ -ಫುಲೆ ಅವರ ಶ್ರಮ ಅಪಾರವಾಗಿದೆ. ಶ್ರಮ, ಶ್ರದ್ಧೆ ಹಾಗೂ ಒಗ್ಗಟ್ಟಿನಿಂದ ಸಮಾಜವನ್ನು ಮುಖ್ಯವಾಹಿನಿಗೆ ತರಬೇಕು ಎಂದರು.

ಮುಖಂಡ ಕಾಡಪ್ಪ ಮಾಳಿ ಮಾತನಾಡಿ, ಜು.೧೩ರಂದು ಜಮಖಂಡಿಯಲ್ಲಿ ರಾಜ್ಯ ಮಾಳಿ-ಮಾಲಗಾರ ಸರ್ಕಾರಿ, ಅರೇ ಸರ್ಕಾರಿ, ಉದ್ಯಮಿಗಳ ಸಮಾವೇಶ ಹಮ್ಮಿಕೊಂಡಿದ್ದೇವೆ. ಅಂದು ಮಾಳಿ ಸಮುದಾಯದ ಮಾಹಿತಿ ಕೈಪಿಡಿ ಹೊರತರಲಾಗುವುದು ಎಂದು ತಿಳಿಸಿದರು.

ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ, ಎಸ್.ಕೆ.ಬುಟಾಳಿ, ರವಿ ಕುರಬೇಟ, ಶಿವಶಂಕರ ಮುಕರಿ, ಶಿವಾನಂದ ದಿವಾನಮಳ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಮಾಳಿ ಸಮುದಾಯದ ಅಧ್ಯಕ್ಷ ಗಿರೀಶ ದಿವಾನಮಳ, ಬಸವರಾಜ ಬುಟಾಳೆ, ಬಸವರಾಜ ಯಾದವಾಡ, ಆನಂದ ಲಗಳಿ, ರವಿ ಬಡಕಂಬಿ, ಪ್ರಶಾಂತ ತೊಡಕರ, ಮಹಾಂತೇಶ ಮಾಳಿ, ಸಚಿನ ಬುಟಾಳೆ, ರಾಜು ಹಳ್ಳದಮಳ, ಮಹಾದೇವ ಹೊನ್ನಳಿ ಇತರರು ಇದ್ದರು.

ಬಸವಣ್ಣನವರ ಕಾಯಕ ತತ್ತ್ವಗಳನ್ನು ಮಾಳಿ-ಮಾಲಗಾರ ಸಮುದಾಯ ಪಾಲಿಸುತ್ತ ಬಂದಿದೆ. ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡು ಕೃಷಿಕ ಕುಟುಂಬವಾಗಿದೆ. ಸಮುದಾಯ ಸದೃಢವಾಗಿ ಬೆಳೆಯಲು ಶಿಕ್ಷಣ, ಸಂಘಟನೆ, ಹೋರಾಟ ಅವಶ್ಯವಾಗಿದೆ. | ಶಿವಬಸವ ಸ್ವಾಮೀಜಿ ಗಚ್ಚಿನಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net