ಮಾಲೂರು ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕಿ ಅಶ್ವಿನಿ ವಿರುದ್ದ ಅಸ್ಪೃಶ್ಯತೆ ಆಚರಣೆ ಆರೋಪ/ಎಡಿಜಿಪಿ ಸೂಚನೆಯಂತೆ ಜಾತಿನಿಂದನೆ ಕೇಸ್ ದಾಖಲು

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ತನ್ನ ಅಧೀನ ಸಿಬ್ಬಂದಿಗೆ ಜಾತಿ ನಿಂದನೆ ಮಾಡಿದ ಆರೋಪದಡಿ ಜಿಲ್ಲೆಯ ಮಾಲೂರು ತಾಲ್ಲೂಕಿನ ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕಿ ಟಿ.ಅಶ್ವಿನಿ ವಿರುದ್ದ ಕೂಡಲೇ ದೂರು ದಾಖಲಿಸುವಂತೆ ಕೇಂದ್ರ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷರು ನೀಡಿರುವ ಸೂಚನೆ ಆದರಿಸಿ ಮಾಲೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಬಂಧನ ಭೀತಿಯಲ್ಲಿ ಅಧಿಕಾರಿ ಚುನಾವಣಾ ಸಮಯವಾದ್ದರಿಂದ ಪೂರ್ವಾನುಮತಿ ಪಡೆಯದೇ ರಜೆ ಹಾಕಿ ತಲೆಮರೆಸಿಕೊಂಡಿದ್ದಾರೆ.

ಮಾಲೂರಿನ ಭೂದಾಖಲೆಗಳ ಇಲಾಖೆಯಲ್ಲಿ ಭೂಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಹನಾ ಎಂಬುವವರು ನೀಡಿರುವ ದೂರಿನ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿರುವ ಕೇಂದ್ರ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷರು ಆರೋಪ ಎದುರಿಸುತ್ತಿರುವ ಸಹಾಯಕ ನಿರ್ದೇಶಕಿ ಅಶ್ವಿನಿ ಅವರು ಅಸ್ಪೃಶ್ಯತೆ ಆಚರಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಅವರ ವಿರುದ್ದ ಕೂಡಲೇ ದೂರು ದಾಖಲಿಸಿ ವರದಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಹಿನ್ನಲೆಯಲ್ಲಿ ಕೋಲಾರ ಎಸ್ಪಿ ಅವರ ಸೂಚನೆಯಂತೆ ಮಾಲೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ದೂರಿನಲ್ಲಿ ಸಹನಾ ಅವರು ಆರೋಪಿಸಿರುವಂತೆ ಭೂಮಾಪನಾ ಸಹಾಯಕ ನಿರ್ದೇಶಕಿಯಾಗಿರುವ ಅಶ್ವಿನಿ ಅವರು ಸಾರ್ವಜನಿಕರ ಸಮ್ಮುಖದಲ್ಲೇ ತನ್ನನ್ನು ಅವರ ಕಚೇರಿಗೆ ಬರಬಾರದು ಎಂದು ಏರುಧ್ವನಿಯಲ್ಲಿ ಮಾತನಾಡಿ, ಜಾತಿನಿಂದನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಸದರಿ ದೂರಿನಲ್ಲಿ ಆರೋಪಿಸಿರುವ ಅಂಶಗಳ ಬಗ್ಗೆ ಬೆಂಗಳೂರಿನ ಕೇಂದ್ರ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷರು ಪ್ರಾಥಮಿಕವಾಗಿ ವಿಚಾರಣೆ ಕೈಗೊಂಡು ಸಲ್ಲಿಸಿರುವ ವಿಚಾರಣಾ ವರದಿಯಲ್ಲಿ ಅರ್ಜಿದಾರರಾದ ಸಹನಾ ಅವರೊಂದಿಗೆ ಎಡಿಎಲ್‌ಆರ್ ಅಶ್ವಿನಿ ಅವರು ಅಸ್ಪೃಶ್ಯತೆ ಆಚರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿAದ ಅವರ ವಿರುದ್ದ ಅನುಸೂಚಿತಿ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ಪ್ರತಿಬಂಧ ಕಾಯಿದೆಯಡಿ ದೂರು ದಾಖಲಿಸುವಂತೆ ಸೂಚಿಸಿದ್ದಾರೆ.

ಭೂಮಾಪನಾ ಇಲಾಖೆ ಸಹಾಯಕ ನಿರ್ದೇಶಕರಾಗಿರುವ ಅಶ್ವಿನಿ ಅವರ ವಿರುದ್ಧ ಅನುಸೂಚಿತ ಜಾತಿ ಅನುಸೂಚಿತ ಪಂಗಡಳ ದೌರ್ಜನ್ಯ ತಡೆ ಕಾಯಿದೆ ೧೯೮೯ ರ ರೀತ್ಯಾ ಪ್ರಕರಣ ದಾಖಲಿಸಿ ಕೈಗೊಂಡ ಕ್ರಮದ ಕುರಿತು ಐದು ದಿನಗಳೊಳಗೆ ತಮಗೆ ಮಾಹಿತಿ ನೀಡುವಂತೆ ಎಸ್ಪಿ ಅವರಿಗೆ ಸೂಚಿಸಲಾಗಿದೆ.

ಈ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಲೂರು ಪೊಲೀಸ್ ಠಾಣೆಗೆ ನೀಡಿರುವ ಸೂಚನೆ ಅನ್ವಯ ಸಹನಾ ಅವರ ದೂರನ್ನು ಸ್ವೀಕರಿಸಿ ಎಫ್‌ಐಆರ್ ದಾಖಲಿಸಿದ್ದಾರೆ.

ಸಹನಾ ನೀಡಿರುವ ದೂರಿನಲ್ಲಿ ಎಡಿಎಲ್‌ಆರ್ ಅಶ್ವಿನಿ ಅವರು ನಾನು ಯಾವ ಜಾತಿಗೆ ಸೇರಿದ್ದೇನೆ ಎಂದು ನನ್ನ ಜಾತಿ ತಿಳಿದುಕೊಂಡು ಕಚೇರಿ ಕೆಲಸದ ನಿಮಿತ್ತ ಅವರ ಚೇಂಬರ್‌ಗೆ ಹೋದಾಗ ತನ್ನಿಂದ ದೂರ ನಿಂತುಕೋ ಎಂದು ಗದರುತ್ತಿದ್ದರು. ಸುಮಾರು ಏಳೆಂಟು ತಿಂಗಳಿAದ ಸತತವಾಗಿ ಜಾತಿ ನಿಂದನೆ ಮಾಡಿ ಕಿರುಕುಳ ನೀಡಿದ್ದರ ಹಿನ್ನಲೆ ನಾನು ಮಾನಸಿಕ ಹಿಂಸೆಗೆ ಗುರಿಯಾಗಿ ಪಾರ್ಶ್ವವಾಯು ಕಾಯಿಲೆಗೆ ಒಳಗಾಗಿ ಚಿಕಿತ್ಸೆ ಪಡೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ನಾಗರೀಕತೆ ಇಷ್ಟೊಂದು ಬೆಳದಿರುವಾಗ ನೀವು ನನ್ನ ಜಾತಿ ನಿಂದನೆ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದಾಗ ಎಡಿಎಲ್‌ಆರ್ ಅಶ್ವಿನಿ ಅವರು ನೀನು ಏನು ಬೇಕಾದರೂ ಮಾಡಿಕೋ, ನನಗೆ ಭಯವಿಲ್ಲ, ನಾನು ಶಾಸಕ ಕೆ.ವೈ.ನಂಜೇಗೌಡರ ಸಂಬAಧಿ ಅವರಿಗೆ ಹೇಳಿ ನಿನ್ನನ್ನು ಬೇರೆ ಕಡೆ ವರ್ಗಾವಣೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ನೊಂದ ದೂರು ದಾರರಾದ ಸಹನಾ ತಿಳಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ೫ ರಂದು ಅವರ ಚೇಂಬರ್‌ಗೆ ಹೋದಾಗ ನೀನು ನನ್ನ ಬಳಿ ಬರಬೇಡ, ಏನಾದರೂ ವಿಷಯವಿದ್ದರೆ ವಿಷಯ ನಿರ್ವಾಕರ ಕಡೆಯಿಂದ ಹೇಳಿಸು, ಬೋವಿ ಜಾತಿಯವರನ್ನು ನಾನು ಹತ್ತಿರ ಸೇರಿಸೋದಿಲ್ಲ ಎಂದು ಸಿಬ್ಬಂದಿ ಎದುರಲ್ಲೇ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ನಡುವೆ ಕಳೆದ ಡಿ.೬ ರಂದು ಎಡಿಎಲ್‌ಆರ್ ಚೇಂಬರ್‌ಗೆ ನಾನು ಹೋದಾಗ ಸಾರ್ವಜನಿಕರ ಎದುರಲ್ಲೇ ಏಕೆ ಒಳಗೆ ಬಂದಿದ್ದು ಎಂದು ಪ್ರಶ್ನಸಿ ಅವಮಾನಿಸಿದ್ದಾರೆ ಎಂದು ತಿಳಿಸಿರುವ ಅವರು, ಕರ್ನಾಟಕ ಭೂಕಂದಾಯ ಅಧಿನಿಯಮ ೧೯೬೪ ಹಾಗೂ ನಿಯಮಾವಳಿ ೧೯೬೬ ತಿದ್ದುಪಡಿ ೨೦೧೩ರ ನಿಯಮ ೪೬ ಎಫ್ ರಂತೆ ಪರವಾನಗಿ ಭೂಮಾಪಕರ ಕಾರ್ಯಕ್ಷೇತ್ರವನ್ನು ವರ್ಗಾವಣೆ ಮಾಡಲು ಅನುಮತಿ ಇಲ್ಲದಿದ್ದರೂ ಈ ನಿಯಮಕ್ಕೆ ವಿರುದ್ದವಾಗಿ ತನ್ನ ವಿರುದ್ದ ಸಂಚು ಮಾಡಿ ತಾನು ದಲಿತ ಮಹಿಳೆಯಾದ ಕಾರಣಕ್ಕೆ ತನ್ನ ಕರ್ತವ್ಯ ನಿರ್ವಹಣೆಗೆ ಬಳಸುತ್ತಿದ್ದ ಲಾಗಿನ್ ಸ್ಥಗಿತಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net