ಮಾಲೂರಿನಲ್ಲಿ ಮುಂದುವರೆದ ಹಾಲಿ ಮತ್ತು ಮಾಜಿ ಶಾಸಕರ ವಾಕ್ ಸಮರ / ವೇದಿಕೆಯ ಮೇಲೆ ಕಣ್ಣೀರಾಕಿದ ಹಾಲಿ ಶಾಸಕ ಕೆ.ವೈ.ನಂಜೇಗೌಡ / ನ್ಯಾಯಾಲಯದ ತೀರ್ಪಿಗೆ ಕಾಯೋಣ ವಾಕ್ ಸಮಯ ನಿಲ್ಲಿಸಲು ಹಿರಿಯ ಸಲಹೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಮಾಲೂರು ವಿಧಾನ ಸಭೆ ಕ್ಷೇತ್ರದಲ್ಲಿ ಹಾಲಿ ಶಾಸಕ ಕೆ.ವೈ.ನಂಜೇಗೌಡ ಮತ್ತು ಮಾಜಿ ಶಾಸಕ ಕೆ.ಎಸ್.ಮಂಜುನಾಥ್‌ಗೌಡರ ಮಧ್ಯೆ ಕುರುಕ್ಷೇತ್ರ ಏರ್ಪಟ್ಟಿದ್ದು, ಏಕವಚನದ ಪದ ಪ್ರಯೋಗದಿಂದ ಹಾಲಿ ಶಾಸಕ ಕೆ.ವೈ.ನಂಜೇಗೌಡ ಮಂಗಳವಾರ ಕಾರ್ಯಕರ್ತರ ಮಧ್ಯೆ ಕಣ್ಣೀರಾಕಿದ ಪ್ರಸಂಗ ನಡೆಯಿತು.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ನ್ಯಾಯಾಲಯ ಚುನಾವಣೆ ಘೋಷಣೆ ಅಸಿಂಧು ಮತ್ತು ಮರು ಮತದಾನ ನಡೆಸಬೇಕು ಎಂದು ಇತ್ತೀಚೆಗೆ ತೀರ್ಪು ನೀಡಿ ಮೇಲ್ಮನವಿ ಸಲ್ಲಿ ೩೦ ದಿನಗಳ ಕಾಲಾವಕಾಶವನ್ನು ಹಾಲಿ ಶಾಸಕ ಕೆ.ವೈ.ನಂಜೇಗೌಡರಿಗೆ ನ್ಯಾಯಾಲಯ ನೀಡಿದೆ.

ತೀರ್ಪು ಹೊರಬಿದ್ದ ದಿನದಿಂದ ಹಾಲಿ ಮತ್ತು ಮಾಜಿಗಳ ಮಧ್ಯೆ ವಾಕ್ ಸಮರ ಮುಂದುವರೆದಿದ್ದು, ಸೋಮವಾರ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ನಂಜೇಗೌಡರ ವಿರುದ್ಧ ಏಕವಚನದಲ್ಲಿ ಪದ ಪ್ರಯೋಗ ಮಾಡಿ ಅವರ ಕುಟುಂಬದ ವಿರುದ್ಧವೂ ವಾಗ್ದಾಳಿ ನಡೆಸಿದ್ದರು.

ಇಂದು ಹಾಲಿ ಶಾಸಕ ಕೆ.ವೈ.ನಂಜೇಗೌಡ ಕಾರ್ಯಕರ್ತರ, ಮುಖಂಡರ ಒತ್ತಾಯದ ಮೇಲೆ ಮಂಗಳವಾರ ತಮ್ಮ ಅಪಾರ ಬೆಂಬಲರೆAದು ನಡೆಸಿದ ಸಭೆ ಮಾದರಿ ಪತ್ರಿಕಾಗೋಷ್ಠಿಯಲ್ಲಿ ಹಾಲಿ ಶಾಸಕ ಆರೋಪಗಳಿಗೆ ಉತ್ತರಿಸುತ್ತಾ ವೇದಿಕೆ ಮೇಲೆ ಕಣ್ಣೀರು ಹಾಕಿ ನನ್ನ ಮೇಲೆ ಎಷ್ಟೇ ಆರೋಪಗಳು ಮಾಡಿದರು ಸಹಿಸಿಕೊಳ್ಳುತ್ತೇವೆ. ನನ್ನ ಕುಟುಂಬವನ್ನು ಬೀದಿಗೆ ಎಳೆತಂದಿದ್ದಾರೆ. ನನ್ನ ತಂದೆ ತಾಯಿಯ ವಿಷಯವನ್ನು ಮಾತನಾಡಿದ್ದಾರೆಂದು ಕಣ್ಣೀರು ಹಾಕಿದರು.

ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಕೆ.ವೈ.ನಂಜೇಗೌಡ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದು, ಈ ಹಂತದಲ್ಲಿಯೇ ವಾಕ್ ಸಮರಗಳು ಮುಂದುವರೆದಿದ್ದು, ಇಡೀ ಜಿಲ್ಲೆ ಮತ್ತು ರಾಜ್ಯ ನೋಡುವಂತೆ ಆಗಿದೆ. ಈ ಮಧ್ಯೆ ಮಾಜಿ ಮತ್ತು ಹಾಲಿ ಶಾಸಕರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳನ್ನು ಮಾಡಿಕೊಳ್ಳುತ್ತಿದ್ದು, ಇದರಿಂದ ಕಾರ್ಯಕರ್ತರ ಭಾವನೆಗಳು ಕೆರಳುವಂತೆ ಮಾಡುತ್ತಿದ್ದು, ಪೋಲಿಸ್ ಠಾಣೆಗೆ ದೂರು ಪ್ರತಿದೂರುಗಳನ್ನು ನೀಡುವ ಹಂತಕ್ಕೆ ತಲುಪಿದೆ.

ಮಾಲೂರಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಹಾಲಿ ಮತ್ತು ಮಾಜಿ ಶಾಸಕರುಗಳ ಕಾರ್ಯಕರ್ತರ ಮಧ್ಯೆ ಉದ್ರಿಕ್ತ ವಾತಾವರಣ ನಿರ್ಮಾಣ ಮಾಡುಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಬ್ಬರು ನಾಯಕರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಾವಿರಾರು ಕಾರ್ಯಕರ್ತರು ಮತ್ತು ಮುಖಂಡರು ಜಮಾಯಿಸಿದ್ದರು.

ನ್ಯಾಯಾಲಯ ೬ ತಿಂಗಳು ಮತ್ತು ಒಂದು ವರ್ಷದ ಒಳಗಾಗಿ ತೀರ್ಪು ನೀಡಿದ್ದರೆ ಈ ಮಟ್ಟಕ್ಕೆ ಕಾರ್ಯಕರ್ತರ ಮಧ್ಯೆ ದ್ವೇಷ ಮತ್ತು ಅಸೂಯೆ ಬರುತ್ತಿರಲಿಲ್ಲ. ಎರಡೂವರೆ ವರ್ಷದ ನಂತರ ತೀರ್ಪು ಬಂದ ಕಾರಣ ಇಬ್ಬರು ನಾಯಕರ ಮಧ್ಯೆ ವಾಕ್ ಸಮರಕ್ಕೆ ಕಾರಣವಾಗಿ ಅದು ಕಾರ್ಯಕರ್ತರ ಮಧ್ಯೆಯೂ ಬೆಂಕಿ ಬೀಳುವಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂಬುದು ಎರಡೂ ಕಡೆಯ ಕಾರ್ಯಕರ್ತರ ಅನಿಸಿಕೆಗಳು ಆಗಿವೆ. ಆದರೆ ನ್ಯಾಯಾಲಯ ತೀರ್ಪನ್ನು ಯಾರೂ ಪ್ರಶ್ನಿಸುವಂತಿಲ್ಲ. ನ್ಯಾಯಾಲಯ ತೀರ್ಪಿಗೆ ಅನುಗುಣವಾಗಿ ತಲೆ ಬಗ್ಗಿಸಿ ನಡೆಯಬೇಕಾಗಿದೆ. ಮೇಲ್ಮನವಿಗೆ ಕಾಲಾವಕಾಶ ನೀಡಿರುವುದರಿಂದ ಅಲ್ಲಿಯವರೆವಿಗೆ ತಾಳ್ಮೆಯಿಂದ ಕಾಯಬೇಕಾಗುತ್ತದೆ ಎಂಬುದು ಸಾರ್ವಜನಿಕರ ಅನಿಸಿಕೆಗಳಾಗಿವೆ.

ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಎರಡೂ ಕಡೆಯ ಕಾರ್ಯಕರ್ತರು ಮತ್ತು ಮುಖಂಡರು ವಾಗ್ದಾಳಿಗಳನ್ನು ಕೈಬಿಟ್ಟು ಸಾಮರಸ್ಯದಿಂದ ಮುಂದುವರೆಯಬೇಕು. ಮೊದಲಿನಿಂದಲೂ ಮಾಲೂರು ತಾಲ್ಲೂಕು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಅದನ್ನೇ ಮುಂದುವರೆಸಬೇಕು. ಇಲ್ಲಿಯವರೆವಿಗೂ ಕ್ಷೇತ್ರದಲ್ಲಿ ಆಯ್ಕೆ ಆಗಿರುವ ಶಾಸಕರು ಈ ಮಟ್ಟಕ್ಕೆ ಏಕವಚನದಲ್ಲಿ ಪದ ಪ್ರಯೋಗ ಮಾಡಿರುವ ಉದಾಹರಣೆಗಳು ಇಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಇದನ್ನು ಇಲ್ಲಿಗೇ ನಿಲ್ಲಿಸಿ ನ್ಯಾಯಾಲಯದ ತೀರ್ಪಿಗೆ ಬದ್ಧರಾಗುವ ಕೆಲಸ ಮಾಡಬೇಕಾಗಿದೆ ಎಂದು ಮಾಲೂರು ತಾಲ್ಲೂಕಿನ ಹಿರಿಯರ ಮಾತಾಗಿದೆ.

ಚಿತ್ರ ೨೩ ಕೆ.ಎಲ್.ಆರ್. ೦೪ : ಹಾಲಿ ಶಾಸಕ ಕೆ.ವೈ.ನಂಜೇಗೌಡ ರವರ ಭಾವಚಿತ್ರ

ಚಿತ್ರ ೨೩ ಕೆ.ಎಲ್.ಆರ್. ೦೪ಎ : ಮಾಜಿ ಶಾಸಕ ಕೆ.ಎಸ್.ಮಂಜುನಾಥ್‌ಗೌಡ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net