ವಿಜಯವಾಣಿ ಸುದ್ದಿಜಾಲ ಕೋಲಾರ
ಆರ್.ಎಸ್.ಎಸ್.ಗೆ ೧೦೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ದೇಶದಾದ್ಯಂತ ಹಮ್ಮಿಕೊಂಡಿರುವ ಪಥಸಂಚಲನ ಭಾನುವಾರ ಮಾಲೂರು ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಮಾಲೂರು ಪಟ್ಟಣ ಕೇಸರಿಮಯವಾಗಿತ್ತು.
ಕಳೆದ ವಾರ ಶ್ರೀನಿವಾಸಪುರದಲ್ಲಿ ನಡೆದ ಪಥಸಂಚಲನ ವೇಳೆಯಲ್ಲಿ ಅನ್ಯ ಕೋಮಿನವರು ಅಲ್ಲಾ ಹು ಅಕ್ಬರ್ ಎಂಬ ಘೋಷಣೆ ಕೂಗಿದ ಹಿನ್ನಲೆಯಲ್ಲಿ ಮಾಲೂರು ಪಟ್ಟಣದಲ್ಲಿ ಇಂದು ನಡೆದ ಗಣವೇಶಗಳ ಪಥಸಂಚಲನದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಆರ್.ಎಸ್.ಎಸ್.ನ್ನು ನಿಶೇಧಿಸಬೇಕೆಂದು ಸಚಿವ ಪ್ರಿಯಾಂಕಖರ್ಗೆ ಸರ್ಕಾರಕ್ಕೆ ಪತ್ರ ಬರೆದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ನಡೆಸಲಾಗುತ್ತಿರುವ ಪಥಸಂಚಲನ ಮತ್ತಷ್ಟು ವಿಸ್ತಾರಗೊಂಡಿದ್ದು, ಭಾನುವಾರ ಮಾಲೂರಿನಲ್ಲಿ ನಡೆದ ಪಥಸಂಚಲನದಲ್ಲಿ ಸಾವಿರಾರು ಗಣವೇಶಗಳು ಭಾಗವಹಿಸಿದ್ದರು. ಮೆರವಣಿಗೆ ಸಾಗಿದ ರಸ್ತೆ ಮತ್ತು ವೃತ್ತಗಳಲ್ಲಿ ಆರ್.ಎಸ್.ಎಸ್.ನ ಬಂಟಿAಗ್ಸ್, ಕೇಸರಿ ಧ್ವಜಗಳು, ದ್ವಾರ ಬಾಗಿಲುಗಳು ದೇಶಕ್ಕಾಗಿ ಹೋರಾಡಿದ ಮಹನೀಯರ ಭಾವಚಿತ್ರಗಳಿರುವ ಬೃಹದ್ದಾಕಾರದ ಕಟೌಟ್‌ಗಳನ್ನು ನಿರ್ಮಾಣ ಮಾಡಿ ಅಲಂಕಾರ ಮಾಡಲಾಗಿತ್ತು.
ಪಟ್ಟಣದ ಹುಂಡಾ ಕ್ರೀಡಾಂಗಣ ಮಾರಿಯಮ್ಮ ದೇವಸ್ಥಾನ ಸೇರಿದಂತೆ ಸುಮಾರು ೪ ಕಿ.ಮೀ. ಉದ್ದದ ಪಥಸಂಚಲನ ಸಾಗಿದ ಉದ್ದಕ್ಕೂ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು. ಗಣವೇಶಧಾರಿಗಳು ಕೈಯಲ್ಲಿ ಕೋಲು ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ನಂತರ ಹುಂಡಾ ಕ್ರೀಡಾಂಗಣಕ್ಕೆ ಮತ್ತೆ ಪಥಸಂಚಲನ ಮರಳಿ ಬಂದಿತ್ತು.
ಸುಮಾರು ೪ ಸಾವಿರಕ್ಕೂ ಹೆಚ್ಚು ಗಣವೇಶಧಾರಿಗಳು ಭಾಗವಹಿಸಿದ್ದ ಪಥಸಂಚಲನವನ್ನು ವೀಕ್ಷಿಸಲು ಸುಮಾರು ೨ ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು. ಗಣವೇಶಧಾರಿಗಳು ಸಾಗುತ್ತಿದ್ದ ಪಥಸಂಚಲನದಲ್ಲಿ ಸಾರ್ವಜನಿಕರು ಪುಷ್ಪನಮನ ಸಲ್ಲಿಸಿದರು.
ಗಣವೇಶದಲ್ಲಿ ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ಮಂಜುನಾಥಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಟಿ.ಬಿ ಕೃಷ್ಣಪ್ಪ, ಆರ್.ಎಸ್.ಎಸ್. ಮುಖಂಡರಾದ ಗೋವಿಂದರಾಜು, ರಾಮ್‌ಪ್ರಕಾಶ್ ಮುಂತಾದವರು ಪಥಸಂಚಲನದಲ್ಲಿ ಭಾಗವಹಿಸಿದ್ದರು.