ಮಾರಿಷಸ್‌ನಲ್ಲಿ ಜೆಎಸ್‌ಎಸ್ ಎಂಬಿಬಿಎಸ್ ಕೋರ್ಸ್

1
Published on

ಮಾರಿಷಸ್‌ನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ಎಂಬಿಬಿಎಸ್ ಕೋರ್ಸ್ ಪ್ರಾರಂಭಿಸಲು ಅಲ್ಲಿನ ಸರ್ಕಾರದ ಹೈಯರ್ ಎಜುಕೇಶನ್ ಕಮಿಷನ್‌ನಿಂದ ಅಂಗೀಕಾರ ದೊರೆತಿದೆ. ನವೆಂಬರ್‌ನಿಂದ ಕೋರ್ಸ್ ಪ್ರಾರಂಭವಾಗಲಿದೆ ಎಂದು ಕುಲಪತಿ ಡಾ.ಬಿ.ಸುರೇಶ್ ತಿಳಿಸಿದರು.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಂತಾಗಿದೆ. ಈಗಾಗಲೇ ಪ್ರವೇಶಾತಿ ಆರಂಭವಾಗಿದೆ. 100 ಸೀಟು ಪ್ರವೇಶಕ್ಕೆ ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ನೀಟ್ ಕ್ವಾಲಿಫೈಡ್ ಆಗಿರುವ ದೇಶದ ವಿದ್ಯಾರ್ಥಿಗಳೂ ಪ್ರವೇಶ ಪಡೆಯಬಹುದಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಾರಿಷಸ್ ಸರ್ಕಾರದ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯು ಎಸ್‌ಎಸ್‌ಆರ್‌ಎನ್ ಆಸ್ಪತ್ರೆ, ಐದು ಪ್ರಾದೇಶಿಕ ಆಸ್ಪತ್ರೆಗಳು ಮತ್ತು ಹಲವಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, 600 ಹಾಸಿಗೆಗಳ ಸೌಲಭ್ಯವನ್ನು ವಿದ್ಯಾರ್ಥಿಗಳ ಕ್ಲಿನಿಕಲ್ ತರಬೇತಿಗಾಗಿ ಒದಗಿಸಿದೆ. ಈ ಸಂಬಂಧ ಎಂಒಯು ಮಾಡಿಕೊಳ್ಳಲಾಗಿದೆ ಎಂದರು.

ಭಾರತೀಯ ವಿದ್ಯಾರ್ಥಿಗಳಿಗೆ ಭಾರತದ ಪಠ್ಯಕ್ರಮಕ್ಕೆ ಹೊಂದುವಂಥ ಎಂಬಿಬಿಎಸ್ ಪದವಿಯನ್ನು ಪಡೆಯಲು ಅವಕಾಶ ಕಲ್ಪಿಸಿದೆ. ಆರೋಗ್ಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ನವೀನತೆಗೆ ಉತ್ತೇಜನ ನೀಡಲಿದೆ. ಮಾರಿಷಸ್‌ನಲ್ಲಿ ಬಹುತೇಕ ಮಂದಿ ಭಾರತೀಯ ಮೂಲದವರೇ ಆಗಿದ್ದಾರೆ. ಹೀಗಾಗಿ ಇಲ್ಲಿಂದ ಭಾರತೀಯರು ಹೋಗಿ ವಿದ್ಯಾಭ್ಯಾಸ ಮಾಡುವುದು ಕಷ್ಟದ ಕೆಲಸವಾಗದು. ಶುಲ್ಕ ಸಹ ಕಡಿಮೆ ಇರಲಿದೆ. ಅಕಾಡೆಮಿ ಎಂಬಿಬಿಎಸ್ ಪದವಿ ನೀಡಿದರೆ, ಅದಕ್ಕೆ ಎಲ್ಲೆಡೆ ಮಾನ್ಯತೆ ಇದೆ ಎಂದರು.

ಎಲ್ಲ ರೀತಿಯ ಸೌಲಭ್ಯ: ಮಾರಿಷಸ್‌ನ ನೂತನ ಕ್ಯಾಂಪಸ್ಸಿನ 15,000 ಚ.ಮೀ. ನಿರ್ಮಿತ ಪ್ರದೇಶದಲ್ಲಿ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಅತ್ಯಾಧುನಿಕ ಲ್ಯಾಬ್, ಮ್ಯೂಸಿಯಂಗಳು, ಸಿಮ್ಯುಲೇಷನ್ ಮತ್ತು ಕೌಶಲ ತರಬೇತಿ ಕೇಂದ್ರಗಳಿವೆ. ವೈ-ಫೈ ಸೌಲಭ್ಯವಿರುವ ಸ್ಮಾರ್ಟ್ ಕ್ಲಾಸ್ ರೂಂಗಳು, ಇ-ಲರ್ನಿಂಗ್ ವೇದಿಕೆಗಳು, ವಿದ್ಯಾರ್ಥಿನಿಲಯಗಳು, ಕ್ರೀಡಾಂಗಣಗಳು, ವಿಶ್ರಾಂತಿ ಸೌಲಭ್ಯಗಳು, ಅಧ್ಯಾಪಕರ ಮತ್ತು ಸಂಶೋಧನಾ ಸಹಯೋಗಕ್ಕೆ ಪೂರಕವಾದ ಅವಕಾಶ ಇದೆ ಎಂದು ವಿವರಿಸಿದರು.

ಮಾರಿಷಸ್‌ನ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆಶ್ರಯದಲ್ಲಿ ಪ್ರಸ್ತುತ ಮೂರು ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಆರೋಗ್ಯ ವಿಜ್ಞಾನ ವಿಭಾಗದಲ್ಲಿ ಬಿ ಫಾರ್ಮ್, ಡಿ ಫಾರ್ಮ್ , ಎಂ ಫಾರ್ಮ್ (ವಿವಿಧ ವಿಷಯಗಳಲ್ಲಿ) ಮತ್ತು ಪಿಎಚ್.ಡಿ, ಲೈಫ್ ಸೈನ್ಸ್ ವಿಭಾಗದಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಪರಿಸರ ವಿಜ್ಞಾನಗಳಲ್ಲಿ ಬಿಎಸ್‌ಸಿ (ಆನರ್ಸ್), ಮೈಕ್ರೋಬಯಾಲಜಿ ಮತ್ತು ಪರಿಸರ ವಿಜ್ಞಾನದಲ್ಲಿ ಎಂ.ಎಸ್‌ಸಿ. ಮತ್ತು ಪಿಎಚ್.ಡಿ, ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಆಸ್ಪತ್ರೆ ಮತ್ತು ಆರೋಗ್ಯ ವ್ಯವಸ್ಥೆ ನಿರ್ವಹಣೆಯಲ್ಲಿ ಬಿಬಿಎ (ಆನರ್ಸ್), ಆಸ್ಪತ್ರೆ/ಫಾರ್ಮಸಿ ಆಡಳಿತದಲ್ಲಿ ಎಂಬಿಎ ಮತ್ತು ಪಿಎಚ್.ಡಿ ಇದೆ. ಫಾರ್ಮಸಿ ವಿಭಾಗದ ಪಠ್ಯಕ್ರಮಗಳು ಅಮೆರಿಕದ ಅಕ್ರಡೆಟೇಶನ್ ಕೌನ್ಸಿಲ್ ಫಾರ್ ಫಾರ್ಮಸಿ ಎಜುಕೇಶನ್ನಿನ ಪೂರ್ವಾನುಮತಿಯನ್ನು ಪಡೆದಿದೆ ಎಂದು ಮಾಹಿತಿ ನೀಡಿದರು.

ಮಾರಿಷಸ್‌ನಲ್ಲಿ 2006ರಲ್ಲಿ ಸ್ಥಾಪಿತವಾದ ಜೆಎಸ್‌ಎಸ್ ಅಕಾಡೆಮಿ ಆ ದೇಶದಲ್ಲಿ ಇಂಜಿನಿಯರಿಂಗ್ ಶಿಕ್ಷಣವನ್ನು ನೀಡಿದ ಮೊದಲ ಖಾಸಗಿ ಶಿಕ್ಷಣ ಸಂಸ್ಥೆಯಾಗಿದೆ. ಬಳಿಕ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಇತರ ಕ್ಷೇತ್ರಗಳಿಗೂ ಕಾಲಿಟ್ಟಿದೆ. ಮೈಸೂರಿನ ಜೆಎಸ್‌ಎಸ್ ಎಜುಕೇಶನ್ ಫೌಂಡೇಶನ್ ಇದನ್ನು ನಿರ್ವಹಿಸುತ್ತಿದೆ ಎಂದರು.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ನಿರ್ದೇಶಕ ಶಂಕರಪ್ಪ, ಜೆಎಸ್‌ಎಸ್ ಎಎಚ್‌ಇಆರ್ ಕುಲಪತಿ ಡಾ.ಎಚ್.ಬಸವನಗೌಡಪ್ಪ, ಕುಲಸಚಿವ ಡಾ.ಬಿ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

ಜಾಗತಿಕ ಸ್ಥಾನಮಾನ: ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಭಾರತದ ಅತ್ಯುತ್ತಮ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಮಾನ್ಯತೆ ಪಡೆದಿದೆ. ವೈದ್ಯಕೀಯ ಶಿಕ್ಷಣದಲ್ಲಿ ಅನುಭವಾಧಾರಿತ, ಸಂಶೋಧನಾ ಪ್ರೇರಿತ, ಸಮಗ್ರ ಪಠ್ಯಕ್ರಮಕ್ಕೆ ಸಂಬಂಧಿಸಿದ ಹಲವು ದಶಕಗಳ ಅನುಭವವು ಈಗ ಮಾರಿಷಸ್‌ನಲ್ಲಿ ಪ್ರಾರಂಭಿಸುವ ಎಂಬಿಬಿಎಸ್ ಕಾರ್ಯಕ್ರಮಕ್ಕೆ ಬೆಂಬಲವಾಗಲಿದೆ. ಭಾರತದ ನ್ಯಾಷನಲ್ ಮೆಡಿಕಲ್ ಕಮಿಷನ್ ಮಾರ್ಗಸೂಚಿಗಳ ಪ್ರಕಾರ ರೂಪುಗೊಂಡಿರುವ ಈ ಸಂಸ್ಥೆಯು ಭಾರತೀಯ ಹಾಗೂ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಡಾ.ಬಿ.ಸುರೇಶ್ ತಿಳಿಸಿದರು.

ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಮಾರಿಷಸ್‌ನಲ್ಲಿ ಏನಾದರೂ ಸಂಸ್ಥೆ ಸ್ಥಾಪಿಸಬೇಕು ಎಂದು ಆಪೇಕ್ಷೆಪಟ್ಟರು. ಹಾಗಾಗಿ ನಮ್ಮ ಶಿಕ್ಷಣ ಸಂಸ್ಥೆ ಸ್ಥಾಪಿಸಲಾಯಿತು. ಮೊದಲಿಗೆ ಸಣ್ಣ ಮನೆಯಲ್ಲಿ ಕೌಶಲ ತರಬೇತಿ ಆರಂಭಿಸಲಾಯಿತು. ಬಳಿಕ ನಿವೇಶನ ಪಡೆದು ಕಟ್ಟಡ ನಿರ್ಮಿಸಲಾಯಿತು. ಅದರ ಶಿಲಾನ್ಯಾಸ, ಉದ್ಘಾಟನೆಗೆ ಮಾರಿಷಸ್ ಪ್ರಧಾನಿ ಬಂದಿದ್ದರು. ರಾಷ್ಟ್ರಪತಿಯೂ ಭೇಟಿ ನೀಡಿದ್ದಾರೆ. ಬಳಿಕ ನಾನಾ ಕೋರ್ಸ್‌ಗಳನ್ನು ಆರಂಭಿಸಿದ್ದೇವೆ. ಇದೀಗ ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಬೇಕೆಂದು ಬಯಸುವ ಭಾರತದ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಕೋರ್ಸ್ ಆರಂಭಿಸಲಾಗುತ್ತಿದೆ. ಇದು ಮಾರಿಷಸ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುತ್ತೂರು ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net