

ಚಳ್ಳಕೆರೆ: ಮನೋರೋಗಿಗಳನ್ನು ಪ್ರೀತಿಸುವ ಗುಣ ಸಮಾಜದಲ್ಲಿ ಹೆಚ್ಚಾಗಬೇಕು. ಇದರಿಂದ ಅವರು ಗುಣಮುಖರಾಗುವ ಸಾಧ್ಯತೆ ಹೆಚ್ಚು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಗೌಡ ಜಗದೀಶ ರುದ್ರೆ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಗರದ ಹೊರವಲಯ ಸರ್ಕಾರಿ ಕೈಗಾರಿಕೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಸಮಾನತೆ ಕಾಪಾಡಿಕೊಳ್ಳುವ ಜಾಗೃತಿ ಇರಬೇಕು. ಅಂಗವಿಕಲ, ಮನೋರೋಗಿ ಎನ್ನುವ ತಾರತಮ್ಯ ಭಾವನೆ ಇರಬಾರದು. ಪ್ರತಿದಿನದ ಬದುಕಿನ ಚಟುವಟಿಕೆಯಲ್ಲಿ ಅಂತಹ ರೋಗಿಗಳ ಜತೆ ಆತ್ಮೀಯ ಬೆಸೆಯುವ ರೀತಿ ನಡೆದುಕೊಳ್ಳಬೇಕು ಎಂದು ಹೇಳಿದರು.
ಮನೋರೋಗ ತಜ್ಞ ಡಾ. ಮಂಜುನಾಥ ಮಾತನಾಡಿ, ಮನೋರೋಗಿಗಳಿಗೆ ಕುಟುಂಬ ಮತ್ತು ಸುತ್ತಲಿನ ಪರಿಸರದಲ್ಲಿ ಒಳ್ಳೆಯ ವಾತಾವರಣ ಇರಬೇಕು. ಕೆಲವೊಮ್ಮೆ ಆಘಾತಕಾರಿ ಘಟನೆಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗುವುದು ಸಹಜ. ಚಿಕಿತ್ಸೆ ಮತ್ತು ಅವರಿಗೆ ಪ್ರೋತ್ಸಾಹಿಸುವ ಕಾರ್ಯಚಟುವಟಿಕೆಗಳಿಂದ ಒಳ್ಳೆಯ ಆರೋಗ್ಯವಂತರನ್ನಾಗಿ ಮಾಡಬಹುದು ಎಂದು ಹೇಳಿದರು.
ಅಪರ ಸಿವಿಲ್ ನ್ಯಾಯಾಧೀಶೆ ಎಚ್.ಆರ್.ಹೇಮಾ, ಪ್ರಾಚಾರ್ಯ ಬಿ.ಎಂ.ಬಸಣ್ಣ, ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್, ಉಪಾಧ್ಯಕ್ಷ ಪಿ.ಪಾಲಯ್ಯ, ಟಿಎಚ್‌ಒ ಡಾ.ಎನ್.ಕಾಶಿ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ, ವಕೀಲ ಟಿ.ಶ್ರೀನಿವಾಸ್, ಎಲ್.ಕುಮಾರ ಮತ್ತಿತರರು ಇದ್ದರು.