ಮಾನವೀಯತೆ ಮೆರೆದ ಸೋಮಶೇಖರ್

14
Published on

ಕುವೆಂಪುನಗರದ ರಾಷ್ಟ್ರಕವಿ ಕುವೆಂಪು ಪ್ರತಿಮೆಯ ಬಳಿ ಹಲವು ದಿನಗಳಿಂದ ಆಹಾರ, ನೀರು, ಸ್ನಾನ ಇಲ್ಲದೆ ರಸ್ತೆ ಬದಿಯಲ್ಲಿ ನಿತ್ರಾಣಗೊಂಡು ಬಿದ್ದಿದ್ದ ಯುವಕನನ್ನು ಭಾನುವಾರ ಆಸ್ಪತ್ರೆಗೆ ಸೇರಿಸಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾನವೀಯತೆ ಮೆರೆದಿದ್ದಾರೆ.

ನಂಜನಗೂಡು ಮೂಲದ ಶ್ರೀಕಂಠ ಆಸ್ಪತ್ರೆಗೆ ಸೇರಿದ ಯುವಕ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಎಂ.ಕೆ. ಸೋಮಶೇಖರ್, ಕೆ.ಆರ್. ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಆಂಬುಲೆನ್ಸ್ ತರಿಸಿ ನಿರಾಶ್ರಿತನಿಗೆ ಹೆಚ್ಚಿನ ಚಿಕಿತ್ಸೆ, ಔಷಧೋಪಚಾರ ನೀಡಲು ಸೂಚಿಸಿದರು.

ಪಾಲಿಕೆಯ ನಿರಾಶ್ರಿತರ ಕೇಂದ್ರಕ್ಕೂ ಕರೆ ಮಾಡಿ ಗುಣಮುಖನಾದ ನಂತರ ಆತನಿಗೆ ಕೇಂದ್ರಕ್ಕೆ ದಾಖಲು ಮಾಡಿಕೊಳ್ಳಿ ಎಂದು ಮನವಿ ಮಾಡಿದರು. ನಿತ್ರಾಣಗೊಂಡವನಿಗೆ ಸೋಮಶೇಖರ್ ಅವರೇ ನಿಂತು ಆಂಬುಲೆನ್ಸ್ ಮೂಲಕ ಶಿಫ್ಟ್ ಮಾಡಿಸಿದ್ದನ್ನು ನೋಡಿದ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಸೋಮಶೇಖರ್ ಮಾತನಾಡಿ, ಇಂತಹ ಸೇವಾ ಕೆಲಸ ನನಗೇನು ಹೊಸದಲ್ಲ. ರಸ್ತೆಯಲ್ಲಿ ಅದೆಷ್ಟೋ ಜನ ಅಮಾಯಕರು, ಅಪರಿಚಿತರು ನಿತ್ರಾಣಗೊಂಡಿರುವವರನ್ನು ಆಸ್ಪತ್ರೆಗೆ ಸೇರಿಸಿದ್ದೇನೆ. ಆರ್ಥಿಕ ಸಹಾಯ, ಔಷಧೋಪಚಾರ ಕೊಡಿಸಿದ್ದೇನೆ. ಅಪಘಾತಕ್ಕೊಳಗಾದವರಿಗೆ ನೆರವಾಗಿದ್ದೇನೆ ಎಂದರು. ತುರ್ತು ಸ್ಥಿತಿಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗುವಂತೆ ಮಾಡಿದರೆ ಎಷ್ಟೋ ಜನರ ಪ್ರಾಣ ಉಳಿಯುತ್ತದೆ ಎಂದು ಹೇಳಿದರು.

ಕೃಷ್ಣರಾಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ಸಮಾಜ ಸೇವಕರಾದ ರಾಮಪ್ಪ ರಮೇಶ್, ಆಶ್ರಯ ಸಮಿತಿ ಸದಸ್ಯ ಗುಣಶೇಖರ್, ಮುಖಂಡರಾದ ರೂಪೇಶ್, ಆನಂದ್, ನದೀಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net