ಮಾಧ್ಯಮಗಳು ಪ್ರಾಮಾಣಿಕ, ವಸ್ತುನಿಷ್ಠ ಸುದ್ದಿ ಬಿತ್ತರಿಸಲಿ

Published on

ಯಳಂದೂರು: ಮಾಧ್ಯಮಗಳು ಪ್ರಾಮಾಣಿಕ, ವಸ್ತುನಿಷ್ಠ ಸುದ್ದಿಗಳನ್ನು ಬಿತ್ತರಿಸಿ ಸಮಾಜಕ್ಕೆ ಒಳ್ಳೆಯದು ಮಾಡುವ ಪ್ರಯತ್ನ ಮಾಡಬೇಕು. ಇದು ಉದ್ಯಮದ ರೂಪ ಪಡೆದುಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

ಯಳಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹುಲಿ ಸಾವಿನ ಕುರಿತಾದ ಮಾಹಿತಿಯನ್ನು ಕಲೆಹಾಕಿ ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮವಾಗಲು ಪತ್ರಕರ್ತರ ಬದ್ಧತೆಯೇ ಸಾಕ್ಷಿ. ಇಂತಹ ವಸ್ತುನಿಷ್ಠ ವರದಿಗಳನ್ನು ಜನರಿಗೆ ತಲುಪಿಸುವ ಯತ್ನ ಶ್ಲಾಘನೀಯ ಎಂದರು.

ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಭವನ ನಿರ್ಮಾಣ ಮಾಡಲು ನಿವೇಶನ ಗುರುತಿಸಲಾಗಿದ್ದು, ಶೀಘ್ರ ಹಸ್ತಾಂತರಿ ಸಲಾಗುವುದು. ಅಲ್ಲದೆ ತಾಲೂಕಿನ ಪತ್ರಕರ್ತರಿಗೆ ಮನೆ ನಿರ್ಮಿಸಿಕೊಳ್ಳಲು ನಿವೇಶನ ನೀಡಲು ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಮುದ್ರಣ ಮಾದ್ಯಮ ಇಂದಿಗೂ ಕೂಡ ಒಂದು ಶಕ್ತಿಶಾಲಿ ಮಾಧ್ಯಮವಾಗಿ ತನ್ನ ಘನತೆ ಉಳಿಸಿಕೊಂಡಿದೆ. ಪ್ರಾಮಾಣಿಕತೆ ಪತ್ರಕರ್ತರ ಮೂಲಗುಣವಾಗಬೇಕು ಎಂದು ಸಲಹೆ ನೀಡಿದರು. ಮಾಜಿ ಶಾಸಕ ಎಸ್. ಬಾಲರಾಜು ಮಾತನಾಡಿ, ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕೆಲಸ ನಿರ್ವಹಿಸುವ ಮೂಲಕ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತಿದೆ. ಆದರೆ ಸಮಾಜಿಕ ಜಾಲತಾಣಗಳಲ್ಲಿ ಸುದ್ದಿ ಬಿತ್ತಿರುವ ಧಾವಂತದಲ್ಲಿ ಸತ್ಯ ಮರೆಮಾಚುತ್ತಿರುವುದು ಅಪಾಯ. ಇಂತಹ ಸಂದರ್ಭದಲ್ಲೂ ಮುದ್ರಣ ಮಾಧ್ಯಮ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದರು.

ದತ್ತಿ ಪ್ರಶಸ್ತಿ ಪ್ರದಾನ, ವೈದ್ಯ ಕುಟುಂಬಕ್ಕೆ ಸನ್ಮಾನ:

ಪತ್ರಿಕಾ ರಂಗದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ತಾಲೂಕಿನ ಪತ್ರಕರ್ತರಾದ ವೈ.ಕೆ.ಮೋಳೆ ನಾಗರಾಜು, ಮದ್ದೂರು ಪುರುಷೋತ್ತಮ, ಮದ್ದೂರು ಮಂಜುನಾಥ, ಪತ್ರಿಕಾ ವಿತರಕ ಗೂಳಿಪುರ ಸುಭಾಷ್ ಅವರಿಗೆ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 40 ವರ್ಷಗಳಿಂದಲೂ ಪಟ್ಟಣದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯ ಕುಟುಂಬವಾದ ಡಾ. ರಮೇಶ್ ಉಡುಪ, ಡಾ. ಶಶಿಕಲಾ ರಮೇಶ್, ಡಾ. ಕಾರ್ತಿಕ್ ಉಡುಪ, ಡಾ. ಮೇಘ ಕಾರ್ತಿಕ್ ಅವರನ್ನು ಸನ್ಮಾನಿಸಲಾಯಿತು.

ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಪಪಂ ಅಧ್ಯಕ್ಷೆ ಲಕ್ಷ್ಮೀ ಮಲ್ಲು ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ್ ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದೇವರಾಜು ಕಪ್ಪಸೋಗೆ, ರಾಜ್ಯಮಂಡಳಿ ಸದಸ್ಯ ಗೂಳೀಪುರ ನಂದೀಶ್, ತಾಲೂಕು ಅಧ್ಯಕ್ಷ ಅಂಬಳೆ ವೀರಭದ್ರನಾಯಕ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕ ಕಮರವಾಡಿ ರೇವಣ್ಣ, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ಆರ್.ನಂಜುಂಡಯ್ಯ, ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್, ಕಿನಕಹಳ್ಳಿ ರಾಚಯ್ಯ, ರೈತ ಸಂಘದ ಹೊನ್ನೂರು ಪ್ರಕಾಶ್, ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ, ಜೆ.ಶ್ರೀನಿವಾಸ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿ. ನಾಗರಾಜು, ಪ್ರಧಾನ ಕಾರ್ಯದರ್ಶಿ ಡಿ.ಪಿ. ಮಹೇಶ್, ಜಿಲ್ಲಾ ನಿರ್ದೇಶಕ ಫೈರೋಜ್ ಖಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net