

ಹುಣಸೂರು: ತಾಲೂಕಿನ ಗುರುಪುರ ವ್ಯವಸಾಯ ಸೇವಾ ಸಹಕಾರ ಸಂಘದ 134 ಸದಸ್ಯರಿಗೆ 1.9 ಕೋಟಿ ರೂ. ಮೊತ್ತದ ಸಾಲ ಸೌಲಭ್ಯವನ್ನು ಡಿಡಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ವಿತರಿಸಿದರು.
ತಾಲೂಕಿನಲ್ಲಿ ಸಾಲ ವಸೂಲಾತಿ ಶೇ.100ರಷ್ಟು ಇದ್ದು, 36 ಕೋಟಿ ರೂ.ಗಳ ಠೇವಣಿ ಸಂಗ್ರಹವಾಗಿದೆ. ಇದರಿಂದ ರೈತರಿಗೆ ವಾರ್ಷಿಕ 2.5 ಕೋಟಿ ರೂ. ಬಡ್ಡಿ ಸಿಗುತ್ತಿದ್ದು, ಬ್ಯಾಂಕ್‌ನಿಂದ ಶಾಪಿಂಗ್ ಮಾಲ್, ಪೆಟ್ರೋಲ್ ಬಂಕ್ ಸ್ಥಾಪನೆಗೆ ಚಿಂತಿಸಲಾಗಿದೆ ಎಂದು ಹೇಳಿದರು.
ಪಡೆದುಕೊಂಡ ಸಾಲವನ್ನು ನಿಗದಿತ ಸಮಯದಲ್ಲಿ ಪಾವತಿಸಿದಲ್ಲಿ ರೈತರಿಗೆ ಮರುಸಾಲ ನೀಡಲು ಅನುಕೂಲ ಮತ್ತು ಬ್ಯಾಂಕ್ ಅಭಿವೃದ್ಧಿ ಹೊಂದಲಿದೆ. ರೈತರು, ಮಹಿಳಾ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವ್ಯವಹರಿಸುವುದಕ್ಕೆ ಬದಲಾಗಿ ಸಹಕಾರ ಸೇವಾ ಬ್ಯಾಂಕ್‌ಗಳಲ್ಲಿ ವ್ಯವಹರಿಸಬೇಕು ಎಂದು ಸಲಹೆ ನೀಡಿದರು.
ಸಂಘದ ಮೇಲ್ವಿಚಾರಕ ಶ್ರೀನಿವಾಸ್, ಗುರುಕುಮಾರ್, ಮಂಜೇಶಗೌಡ, ದವಾಡುಲ್ಮಾನ್, ಸಿಇಒ ದವಾ, ಮುಖಂಡರಾದ ಹೊಸೂರು ಅಣ್ಣೇಗೌಡ, ಅಣ್ಣೂರು ಕಾಳೇಗೌಡ, ಗ್ರಾ.ಪಂ. ಅಧ್ಯಕ್ಷ ಸುಭಾಷ್, ನಗರಸಭೆ ಸದಸ್ಯ ಎಚ್.ಪಿ.ಸತೀಶ್ ಹಾಜರಿದ್ದರು. ಜಿ.ಡಿ.ಹರೀಶ್‌ಗೌಡರನ್ನು ಸಂಘದಿಂದ ಸನ್ಮಾನಿಸಲಾಯಿತು.