ಮಾದರಿ ಪ್ರವಾಸಿ ತಾಣವಾಗಿ ತಲಕಾಡು ಅಭಿವೃದ್ಧಿ

IMG20230625145637
ತಲಕಾಡಿನಲ್ಲಿ ಭಾನುವಾರ ಆಯೋಜಿಸಿದ್ದ ಕೃತಜ್ಞತಾ ಸಮಾರಂಭವನ್ನು ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಸುನೀತಾ ವೀರಪ್ಪಗೌಡ, ಸುನೀಲ್ ಬೋಸ್, ಮೂಗೂರು ಇತರರು ಹಾಜರಿದ್ದರು.
Published on

ತಲಕಾಡು: ತಲಕಾಡನ್ನು ಮಾದರಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ದೃಢ ಸಂಕಲ್ಪ ಮಾಡಲಾಗಿದ್ದು, ಇದರಿಂದ ಆರ್ಥಿಕ ಚಟುವಟಿಕೆ ಉತ್ತಮಗೊಂಡು ಈ ಭಾಗದ ಜನರ ಜೀವನ ಮಟ್ಟ ಸುಧಾರಣೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.


ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರವಾಸಿಗರಿಗೆ ಅನುಕೂಲ ವಾಗಲೆಂದು ಸಮೀಪದ ಕಾವೇರಿಪುರ-ಕೊಳ್ಳೇಗಾಲ ನದಿಗೆ ನೂತನ ಸಂಪರ್ಕ ಸೇತುವೆ ನಿರ್ಮಿಸಲಾಯಿತು. ಇದಲ್ಲದೆ ತಲಕಾಡು ತಡಿಮಾಲಂಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ನೂತನ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ ಸಾಗಿದೆ ಎಂದರು.


ಈಗಾಗಲೇ ತಲಕಾಡಿನಲ್ಲಿ ನೂತನ ಬಸ್ ಡಿಪೋ ತೆರೆಯಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಮಾಧವಮಂತ್ರಿ ಹಿನ್ನೀರಿನಿಂದ ರಾಮಸ್ವಾಮಿ ನಾಲೆಗೆ ಏತನೀರಾವರಿ ಮೂಲಕ 80 ಕೋಟಿ ರೂ. ವೆಚ್ಚದಲ್ಲಿ ನೀರು ಹರಿಸುವುದು, ಮಾಧವಮಂತ್ರಿ ನೂತನ ಅಣೆಕಟ್ಟೆಯ ಬಳಿ ಸುಂದರ ಉದ್ಯಾನ ನಿರ್ಮಿಸುವ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.


ಧರ್ಮ ರಕ್ಷಣೆ ಮಾಡಲು ಯಾವುದೇ ಪಕ್ಷಕ್ಕೆ ಅಧಿಕಾರವಿಲ್ಲ. ಹೀಗಾಗಿ ಮತಾಂತರ ಕಾಯ್ದೆ ಸೇರಿದಂತೆ ರೈತರಿಗೆ ಮುಳುವಾಗಿದ್ದ ಎಪಿಎಂಸಿ ಕಾಯ್ದೆಯನ್ನು ಸರ್ಕಾರ ಹಿಂಪಡೆಯಿತು ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.


ಸರ್ಕಾರ ಬದಲಾದಂತೆ ಅಧಿಕಾರಿಗಳು ಕೂಡ ಸೂರ್ಯಕಾಂತಿಯಂತೆ ಬದಲಾಗಲೇಬೇಕು. ನಾವು ಸರಿಯಾಗಿದ್ದರೆ ಅಧಿಕಾರಿಗಳ ಮುಲಾಜಿಗೊಳಗಾಗದೆ ಜನರ ಕೆಲಸ ಮಾಡಿಸಬಹುದು ಎಂದು ಸೂಚ್ಯವಾಗಿ ತಿಳಿಸಿದರು.


ಮುಂದಿನ ವಾರ ಸೋಸಲೆ, ಬಳಿಕ ಬನ್ನೂರು ಹೋಬಳಿಯಲ್ಲಿ ಕೃತಜ್ಞತಾ ಸಮಾರಂಭ ನಡೆಯಲಿದೆ. ಇದಾದ ನಂತರ ತಾಲೂಕಿನ ಪ್ರತಿ ಪಂಚಾಯಿತಿಗೂ ಶನಿವಾರ, ಭಾನುವಾರ ಭೇಟಿ ನೀಡಲಾಗುವುದು. ಉಳಿದ ದಿನ ರಾಜ್ಯದ ಜನತೆಗೆ ಮೀಸಲಿಡುತ್ತೇನೆ ಎಂದು ಭರವಸೆ ನೀಡಿದರು.


ವಸತಿ ಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಸುನೀಲ್ ಬೋಸ್ ಮಾತನಾಡಿದರು. ಇದಕ್ಕೂ ಮುನ್ನ ಮಹದೇವಪ್ಪ ಅವರನ್ನು ಮೆರವಣಿಗೆ ಮೂಲಕ ಸಮಾರಂಭದ ಸ್ಥಳಕ್ಕೆ ಕರೆತರಲಾಯಿತು. ಸಮಾರಂಭಕ್ಕೆ ಆಗಮಿಸಿದ್ದ ಜನರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.


ಸಮಾರಂಭದಲ್ಲಿ ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ಗ್ರಾ.ಪಂ.ಅಧ್ಯಕ್ಷ ಜಿ.ಕೆಂಪಯ್ಯ, ತಿ.ನರಸೀಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೂಗೂರು ಎಂ.ಡಿ ಬಸವರಾಜು, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಾಣಿ, ತಾ.ಪಂ. ಮಾಜಿ ಸದಸ್ಯ ನರಸಿಂಹಮಾದನಾಯಕ, ಗ್ರಾ ಪಂ ಸದಸ್ಯರಾದ ಸುಂದರನಾಯಕ, ರವಿ, ನಾಗರಾಜು, ಟಿ.ಎಂ.ವಿಜಯಕುಮಾರ್, ಎಚ್.ರಾಜು, ಕುಕ್ಕೂರು ಗಣೇಶ, ಪ್ರಸನ್ನ, ನಾಗರಾಜು, ಅಕ್ಕೂರು ಗುರುಮೂರ್ತಿ, ಹೆಮ್ಮಿಗೆ ಶೇಷಾದ್ರಿ, ದೊಡ್ಡಾಬಾಗಿಲು ಮಲ್ಲಿಕಾರ್ಜುನಸ್ವಾಮಿ, ಮಲ್ಲೇಶ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net