ಮಾತೃ ಇಲಾಖೆಗೆ ವಾಪಸ್ ಆದೇಶಕ್ಕೆ ತಡೆ ತಂದ ಪಶುವೈದ್ಯಾಧಿಕಾರಿಗಳು

Veterinary
Published on

ಮಾತೃ ಇಲಾಖೆಗೆ ವಾಪಸ್ ಆದೇಶಕ್ಕೆ ತಡೆ ತಂದ ಪಶುವೈದ್ಯಾಧಿಕಾರಿಗಳು

  • ಬೆಂಗಳೂರು
    ಕರ್ನಾಟಕ ಪಶು ವಿಶ್ವವಿದ್ಯಾಲಯದಲ್ಲಿ ನಿಯೋಜನೆಯಲ್ಲಿರುವ ಪಶುವೈದ್ಯಾಧಿಕಾರಿಗಳು ಶಾಶ್ವತವಾಗಿ ವಿವಿಯಲ್ಲೇ ವಿಲೀನಗೊಳ್ಳುವುದಕ್ಕೆ ಶತ ಪ್ರಯತ್ನ ನಡೆಸುತ್ತಿದ್ದು, ಇದರಿಂದ ದಶಕಗಳಿಂದ ನೇಮಕಾತಿಗಾಗಿ ಕಾಯತ್ತಿರುವವರಿಗೆ ಅನ್ಯಾಯವಾಗುವುದು ಬಹುತೇಕ ಖಚಿತವಾಗಿದೆ.
    ವಿವಿಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಇವರನ್ನು ಮಾತೃ ಸಂಸ್ಥೆಗೆ ವಾಪಸ್ ಕಳುಹಿಸುವಂತೆ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ತಂದು ಮುಂದುವರೆಯುವ ಮೂಲಕ ತಮ್ಮ ಪ್ರಭಾವನ್ನು ಪಶುವೈದ್ಯಾಧಿಕಾರಿಗಳು ತೋರಿದ್ದಾರೆ.
    ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಪಶು ವೈದ್ಯಾಧಿಕಾರಿಗಳಾಗಿ ನೇಮಕ ಹೊಂದಿರುವ ಇವರು ವಿವಿಯಲ್ಲಿ ಐದು ವರ್ಷಗಳಿಗೂ ಮೀರಿ ನಿಯೋಜನೆಯಲ್ಲಿಯೇ ಮುಂದುವರೆಯುತ್ತಿದ್ದಾರೆ. ಸರ್ಕಾರದ ನಿಯಮಗಳ ಪ್ರಕಾರ ಐದು ವರ್ಷದ ಅವಧಿಗೆ ಮಾತ್ರ ನಿಯೋಜನೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ.
    ಆದರೆ, ಈ ವೈದ್ಯಾಧಿಕಾರಿಗಳು ನಿಯಮ ಮೀರಿದರೂ ಮಾತೃ ಇಲಾಖೆಗೆ ಹಿಂತಿರುಗಿಲ್ಲ.
    ಪಶು ವೈದ್ಯಾಧಿಕಾರಿಗಳ ತೀವ್ರ ಕೊರತೆಯಿಂದಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಹಲವು ಯೋಜನೆಗಳನ್ನು ಕುಂಠಿತಗೊಂಡಿದ್ದನ್ನು ಅರಿತ ಸರ್ಕಾರ, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ 5 ವರ್ಷಗಳಿಗೂ ಮೀರಿ ನಿಯೋಜನೆ ಅಡಿಯಲ್ಲಿ ತಳವೂರಿರುವ ಪಶು ವೈದ್ಯಾಧಿಕಾರಿಗಳ ಸೇವೆ ಹಿಂಪಡೆಯಲು ನಿರ್ಧರಿಸಿತು. ಈ ಸಂಬಂಧ ಜೂನ್.9ರಂದು ಆದೇಶ ಹೊರಡಿಸಿತ್ತು.
    ಇದರ ಆಧಾರದ ಮೇಲೆ ವಿವಿ ಕುಲಸಚಿವರು ಜೂ.17ರಂದು ಆದೇಶ ಹೊರಡಿಸಿ ಪಶು ವೈದ್ಯಾಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಲು ಆದೇಶ ಹೊರಡಿಸಿದರು.
    ಆದರೆ, ಕಳೆದ 5 ವರ್ಷದಿಂದ ವಿವಿಯ ಆಯಾಕಟ್ಟಿನ ಜಾಗದಲ್ಲಿ ಕರ್ತವ್ಯನಿರ್ವಹಿಸುತ್ತಿರುವ 32 ಪಶು ವೈದ್ಯಾಧಿಕಾರಿಗಳು ತಮ್ಮ ಪ್ರಭಾವ ಬಳಿಸಿ ಮಾತೃ ಇಲಾಖೆಗೆ ತೆರಳಬೇಕೆಂಬ ಜೂ.9ರ ಆದೇಶದಕ್ಕೆ ತಡೆ ತಂದು ವಿವಿಯಲ್ಲೇ ಮುಂದುವರೆಯುತ್ತಿದ್ದಾರೆ.
    ವಿವಿಯು ದಶಕಗಳಿಂದ ಪಶು ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಿಲ್ಲ. ಈ 32 ಪಶುವೈದ್ಯಾಧಿಕಾರಿಗಳು ಮಾತೃ ಇಲಾಖೆಗೆ ವಾಪಸ್ ಹೋಗದೇ ವಿವಿಯಲ್ಲೇ ಉಳಿಯುವುದರಿಂದ
    ಹೊಸ ಹುದ್ದೆಗಳ ಭರ್ತಿಗೆ ವಿವಿಯು ಅರ್ಜಿ ಆಹ್ವಾನಿಸುವುದನ್ನೇ ನಿಲ್ಲಿಸುತ್ತದೆ. ಇದರಿಂದ ವಿವಿಯ ಅಧಿಸೂಚನೆಯನ್ನೇ ಎದುರು ನೋಡುತ್ತಿರುವ ಸಾವಿರಾರೂ ಅಭ್ಯರ್ಥಿಗಳಿಗೆ ಇದು ಅನ್ಯಾಯವಾಗಿದೆ.
    32 ಪಶು ವೈದ್ಯಾಧಿಕಾರಿಗಳ ಪೈಕಿ ಬಹುತೇಕ ವಿದ್ಯಾರ್ಥಿಗಳು ಮೇಲ್ಜಾತಿಗೆ ಸೇರಿದವರಾಗಿದ್ದಾರೆ. ಒಂದು ವೇಳೆ ಇವರನ್ನು ವಿವಿಯಲ್ಲೇ ವಿಲೀನ ಮಾಡಿದರೆ, ಇಷ್ಟು ವರ್ಷ ಪಾಲಿಸಕೊಂಡು ಬಂದಿರುವ ರೋಸ್ಟಾರ್ ಪದ್ಧತಿಗೆ ಇದು ವಿರುದ್ಧವಾಗಲಿದೆ. ಅಲ್ಲದೆ, ಇದರಲ್ಲಿ ಬಹುತೇಕರು ನೆಟ್ ಪ್ರವೇಶ ಪರೀಕ್ಷೆ ತೆಗೆದುಕೊಂಡಿಲ್ಲ. ಅಕ್ರಮವಾಗಿ ಅವರನ್ನು ವಿವಿಯು ವಿಲೀನ ಮಾಡಿದಂತಾಗುತ್ತದೆ.
    ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಸಿ ಪಶುವೈದ್ಯಾಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸಿ ನಿರುದ್ಯೋಗಿಗಳಿಗೆ ನ್ಯಾಯ ಒದಗಿಸಬೇಕೆಂದು ನಿರುದ್ಯೋಗಿಗಳು ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net