

ಶಿವಮೊಗ್ಗ: ಮಲೆಗೌಡ ಲಿಂಗಾಯತ, ಪಂಚಮಸಾಲಿ ಲಿಂಗಾಯತ ಸಮಾಜವನ್ನು 2ಎಗೆ ಸೇರಿಸಬೇಕು. ಕೊಟ್ಟ ಮಾತಿನಂತೆ ನಡೆಯದಿದ್ದರೆ ಸೆಪ್ಟಂಬರ್ 26ರಂದು ಶಿಗ್ಗಾಂವಿಯ ಸಿಎಂ ಮನೆ ಮುಂದೆ ಸತ್ಯಾಗ್ರಹ, ಅಕ್ಟೋಬರ್ 23ರಂದು ವಿಧಾನಸೌಧದ ಎದುರು ಮಾಡು ಇಲ್ಲವೇ ಮೀಸಲಾತಿ ಪಡೆದು ಮಡಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ಶಿವಪ್ಪ ನಾಯಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಗುರುವಾರ ಪ್ರತಿಭಟನಾ ರ‌್ಯಾಲಿ ನಡೆಸಿದ ಬಳಿಕ ಬೃಹತ್ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮೀಸಲಾತಿ ನೀಡದಿದ್ದರೆ 2023ರ ವಿಧಾನಸಭೆ ಚುನಾವಣೆ ವೇಳೆ ಸಮಾಜದ ಅಂತಿಮ ಸಂದೇಶ ಘೋಷಿಸಲಾಗುವುದು ಎಂದರು.
ಕಳೆದೆರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. 2ಗೆ ಸೇರಿಸುವುದರ ಜತೆಗೆ ಲಿಂಗಾಯತ ಎಲ್ಲ ಒಳಪಂಗಡಗಳಿಗೆ ಕೇಂದ್ರದ ಒಬಿಸಿ ಮೀಸಲಾತಿ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ರಾಜ್ಯ ಸರ್ಕಾರ ಈಗಾಗಲೇ ನಾಲ್ಕು ಬಾರಿ ಮಾತು ಕೊಟ್ಟು ಮರೆತಿದೆ. ಈ ಬಾರಿಯೂ ನಮ್ಮನ್ನು ಕಡೆಗಣಿಸಿದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
ಪಂಚಮಸಾಲಿ ಸಮಾಜದ ಮತಗಳನ್ನು ಪಡೆದು ಗೆದ್ದವರು ಬಾಯಿಮುಚ್ಚಿಕೊಂಡು ಸುಮ್ಮನೆ ಇರಬಾರದು. ನಮ್ಮ ಪರವಾಗಿ ಸದನದ ಒಳಗೆ ಮತ್ತು ಹೊರಗೂ ಧ್ವನಿ ಎತ್ತಬೇಕು. ಸಮಾಜದ ಪರವಾಗಿ ನಿಲ್ಲದಿದ್ದರೆ ಚುನಾವಣೆಯಲ್ಲಿ ನಾವೂ ನಿಮ್ಮ ಪರ ಇರುವುದಿಲ್ಲ ಎಂಬ ಖಡಕ್ ಸಂದೇಶ ರವಾನಿಸಿದರು.
ಅಖಿಲ ಕರ್ನಾಟಕ ಪಂಚಮಸಾಲಿ ಲಿಂಗಾಯತ, ಮಲೆಗೌಡ ಲಿಂಗಾಯತ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಜಿಲ್ಲಾಧ್ಯಕ್ಷ ಮಾಲತೇಶ್, ಮುಖಂಡರಾದ ಪ್ರೊ.ವಿಜಯಕುಮಾರ್, ರುದ್ರೇಗೌಡ ಕಡೆಮನೆ, ಎಂ.ಎಸ್.ಕುಮಾರ್, ಎಂ.ಪಿ.ವಿಜಯ್ಕುಮಾರ್, ಉದ್ಯಮಿ ನವೀನ್, ಗಂಗಾಧರ್, ಸತೀಶ್ ಭದ್ರಾವತಿ, ಹೊನ್ನಮ್ಮ, ಮುದ್ದನಹಳ್ಳಿ ಪಿ.ಮಂಜುನಾಥ, ಗಿರೀಶ್, ಮಲ್ಲೇಶಪ್ಪ ಮತ್ತಿತರರು ಪ್ರತಿಭಟನಾ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.