ಮಾಟ, ಮಂತ್ರ ಮಾಡಿಸುವರು ಅವರೇ! ಕೆ.ಎಚ್​. ಮುನಿಯಪ್ಪ ವಿರುದ್ಧ ಶಾಸಕ ಕೆ. ಶ್ರೀನಿವಾಸಗೌಡ ಆರೋಪ

5kolar1
ಶಾಸಕ ಶ್ರೀನಿವಾಸಗೌಡ
Published on

ಕೋಲಾರ: ಏಳು ಬಾರಿ ಸಂಸದರಾಗಿದ್ದ ಕೆ.ಎಚ್​. ಮುನಿಯಪ್ಪ ಅವರಿಗೆ ಮಾಟ, ಮಂತ್ರ ಮಾಡಿಸುವ ಅಭ್ಯಾಸವಿದೆ. ಶನಿಮಹಾತ್ಮನಂತೆ ಇರುವ ಅವರು, ಶಾಸಕ, ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಮಾಟ ಮಾಡಿಸಿದ್ದಾರೆಂದು ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಕೆ. ಶ್ರೀನಿವಾಸಗೌಡ ಆರೋಪಿಸಿದರು.


ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಸೋತ ಮೇಲೆ ಅವರಿಗೆ ಎಲ್ಲವೂ ಅರ್ಥವಾಗುತ್ತಿದೆ ಎಂದರು.
ಇನ್ನು ಮುಂದಾದರೂ ಅವರು ಸರಿ ಹೋಗುತ್ತಾರೆಂದು ನಂಬಿದ್ದೇನೆ. ನನ್ನನ್ನು 2 ಬಾರಿ ಸೋಲಿಸಿದಾಗಲೂ ನನಗೆ ಎಷ್ಟು ನೋವಾಗಿದೆ ಎಂಬುದು ಈಗ ಮುನಿಯಪ್ಪಗೆ ಗೊತ್ತಾಗುತ್ತಿರಬಹುದು. ಅವರು ಯಾವ ಪಕ್ಷವನ್ನಾದರೂ ಸೇರಲಿ, ಅದು ಅವರ ಇಷ್ಟಕ್ಕೆ ಬಿಟ್ಟ ವಿಷಯ. ಅದನ್ನು ಪ್ರಶ್ನಿಸಲು ನಮಗೆ ಅಧಿಕಾರ ಇಲ್ಲ. ನಾನು ಸಹ ಈಗಾಗಲೇ ಕಾಂಗ್ರೆಸ್​ ಸೇರಿಕೊಂಡಿದ್ದೇನೆ ಎಂದು ಹೇಳಿದರು.


ಮುಂಬರುವ ಜಿಪಂ ಚುನಾವಣೆಗೆ ನನ್ನ ಮಗ ಸ್ವರ್ಧಿಸುತ್ತಾನೆ ಎಂಬುದು ನಿಜ. ಅದಕ್ಕೆ ನನ್ನ ಅನುಮತಿ ಸಹ ಇದೆ. ಚುನಾವಣೆಯಲ್ಲಿ ಮಗನ ಪರ ಕೆಲಸ ಮಾಡುತ್ತೇನೆ. ಅದರಲ್ಲಿ ನನಗೆ ಯಾವುದೇ ಮುಜುಗರವಿಲ್ಲ ಎಂದು ಸ್ಪಷ್ಟಪಡಿಸಿದರು.


ರಾಜ್ಯಕ್ಕೆ ಪ್ರಥಮ ಮುಖ್ಯಮಂತ್ರಿ ಕೊಟ್ಟ ಜಿಲ್ಲೆ ಎಂಬ ಹೆಗ್ಗಳಿಕೆ ಕೋಲಾರದ್ದಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಮುಂದಿನ ಸಿಎಂ ಆಗುವ ರೇಸ್​ನಲ್ಲಿದ್ದಾರೆ. ಅದೇ ರೀತಿ ಅವರು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿ, ಮುಖ್ಯಮಂತ್ರಿಯಾದರೆ ಮತ್ತೊಬ್ಬ ಸಿಎಂ ಅನ್ನು ಕೊಟ್ಟ ಕೀರ್ತಿ ಜಿಲ್ಲೆಗೆ ಸಲ್ಲುತ್ತದೆ ಎಂದರು.


ಸಿದ್ದರಾಮಯ್ಯ ಅವರನ್ನು ಇತ್ತೀಚೆಗೆ ಭೇಟಿ ಮಾಡಿದಾಗ 2023ರ ವಿಧಾನಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದೆ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ ಕಳುಹಿಸಿದಲ್ಲಿ ಅವರು ಮುಖ್ಯಮಂತ್ರಿಯಾಗುವುದು ಖಚಿತ. ಇದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ಕ್ಷೇತ್ರಗಳು ಅಭಿವೃದ್ಧಿ ಹೊಂದುತ್ತವೆ ಎಂಬ ಆಶಾಭಾವ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net