ಮಾಚಿದೇವರಿಂದ ಶಿಕ್ಷಣ ಕ್ರಾಂತಿ

20
Published on

12ನೇ ಶತಮಾನದಲ್ಲಿಯೇ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂಬುದನ್ನು ತಿಳಿಸಿಕೊಟ್ಟು, ಶಿಕ್ಷಣ ಕ್ರಾಂತಿ ಮಾಡಿರುವುದಕ್ಕೆ ಮಡಿವಾಳ ಮಾಚಿದೇವರು ಅದ್ಭುತ ಉದಾಹರಣೆ ಎಂದು ಯುವ ಸಾಹಿತಿ ವಿ.ಶ್ರೀಧರ್ ಬಣ್ಣಿಸಿದರು.

ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಆಚರಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ಶನಿವಾರ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಮಾತನಾಡಿದರು.

ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂಬ ನಿಟ್ಟಿನಲ್ಲಿ ಅವರು ಗುರುಕುಲ ಅಭ್ಯಾಸಕ್ಕೆ ಹೋದರು. ನಂತರ ಮಾಚಿದೇವರು ಸಕಲ ವಿದ್ಯಾ ಪಾರಂಗತರಾಗುತ್ತಾರೆ. ಸಕಲ ವಿದ್ಯೆ ಕಲಿತು ಪರಿಪಕ್ವವಾಗಿ ತಮ್ಮನ್ನು ತಾವು ರೂಪಿಸಿಕೊಂಡರು ಎಂದು ನುಡಿದರು.

ಮಡಿವಾಳ ಮಾಚಿದೇವರು ಎಲ್ಲ ರೀತಿಯ ವಿದ್ಯೆ ಕಲಿಯುತ್ತಾರೆ. ಆದರೆ ಅವರಿಗೆ ಯಾವ ವೃತ್ತಿ ಮಾಡಬೇಕು ಎಂದು ಅವರನ್ನು ಕಾಡುತ್ತಿರುತ್ತದೆ. ಆ ಸಂದರ್ಭದಲ್ಲಿ ಬಟ್ಟೆಯನ್ನು ಮಡಿ ಮಾಡುವ ಕೆಲಸ ಮಾಡುವುದಕ್ಕೆ ಅವರಿಗೆ ಹಿಂಜರಿಕೆ ಇರುತ್ತದೆ. ಆಗ ಅವರ ಮನಸ್ಸನ್ನು ಬದಲಾಯಿಸುವ ಕೆಲಸವನ್ನು ಮಲ್ಲಿಕಾರ್ಜುನ ಮಾಡುತ್ತಾರೆ. ನಂತರ ಅವರ ಮನಸ್ಸು ಈ ಕಾರ್ಯ ಮಾಡುವುದಕ್ಕೆ ಯಾವುದೇ ರೀತಿಯ ಹಿಂಜರಿಕೆ ಇರಲಿಲ್ಲ ಎಂದು ತಿಳಿಸಿದರು.

ಯಾರು ಭಕ್ತಿ ಮಾರ್ಗದಿಂದ ನಡೆದುಕೊಳ್ಳುತ್ತಿದ್ದರೋ ಅವರ ಬಟ್ಟೆಗಳನ್ನು ಮಾತ್ರ ಮಡಿ ಮಾಡುತ್ತಿದ್ದರು. ಕೊಲೆಗಡುಕರು, ದರೋಡೆಕೋರರು, ಮೋಸಗಾರರು ಹಾಗೂ ಕಳ್ಳರು ಹಾಗೂ ಮನೆಯಲ್ಲಿ ಊಟ ಮಾಡಿಕೊಂಡು ಸೋಮಾರಿ ಜೀವನ ಕಳೆಯುವವರ ಬಟ್ಟೆ ಮುಟ್ಟುವುದಿಲ್ಲ ಎಂದು ಮಡಿವಾಳ ಮಾಚಿದೇವರು ಶಪಥ ಮಾಡಿದ್ದರು ಎಂದು ತಿಳಿಸಿದರು.

ಇಂದು ಎಷ್ಟೋ ಜನಕ್ಕೆ ಈ ಕೀಳರಿಮೆ ಇದೆ. ಕಾರಣ ಹೆಚ್ಚಿನ ಮಟ್ಟದಲ್ಲಿ ಶಿಕ್ಷಣ ಮಾಡಿದ್ದೇವೆ. ಉತ್ತಮ ಶಾಲಾ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಿದ್ದೇವೆ. ಹಾಗಾಗಿ ಈ ಕೆಲಸ ಮಾಡಬೇಕಾ? ಎಂಬ ಹಿಂಜರಿಕೆ ಇತ್ತೀಚಿನ ದಿನದಲ್ಲಿ ಎಷ್ಟೋ ಯುವಕರಲ್ಲಿ ಇದೆ. ಆ ಹಿಂಜರಿಕೆಯನ್ನು ಹೋಗಲಾಡಿಸಲು ಸಂಘ-ಸಂಸ್ಥೆಗಳು ಮಲ್ಲಿಕಾರ್ಜುನ ಸ್ವಾಮಿಯ ಕೆಲಸವನ್ನು ಮಾಡಬೇಕು. ಸಮುದಾಯದವರಿಗೆ ಅದರ ಅರಿವನ್ನು ಮೂಡಿಸುವಂತಹ ನಿಟ್ಟಿನಲ್ಲಿ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಕಲಾಮಂದಿರದ ವರೆಗೆ ಮಡಿವಾಳ ಮಾಚಿದೇವ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಮುಖಂಡರಾದ ಎಚ್.ವಿ.ರಾಜೀವ್, ಶಿವರಾಮು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net