ಮಾ.೧೩ ರಂದು ಕೋಚಿಮುಲ್ ಸರ್ವಸದಸ್ಯರ ಸಭೆ / ೨ನೇ ೩ ರಷ್ಟು ಮೆಜಾರಿಟಿ ಪಡೆಯಲು ಹಣಾಹಣಿ / ಕೋರ್ಟ್ ಆದೇಶದಂತೆ ಸರ್ವ ಸದಸ್ಯರ ಸಭೆಯಲ್ಲಿ ಕೋಚಿಮುಲ್ ಕ್ಷೇತ್ರ ವಿಂಗಡಣೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ಹಾಲು ಒಕ್ಕೂಟದ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ಉಂಟಾಗಿರುವ ತಿಕ್ಕಾಟದ ಭಾಗವಾಗಿ ಹೈಕೋರ್ಟ್ ಆದೇಶದಂತೆ ಮಾ.೧೩ ರಂದು ಕೋಚಿಮುಲ್ ಸರ್ವ ಸದಸ್ಯರ ಸಭೆಯನ್ನು ಕೋಚಿಮುಲ್ ಆಡಳಿತ ಮಂಡಳಿ ಕೋಲಾರ ಮುಳಬಾಗಿಲು ರಸ್ತೆಯ ನಂದಿನಿ ಪ್ಯಾಲೆಸ್‌ನಲ್ಲಿ ಕರೆಯಲಾಗಿದೆ.

ಮಾ.೧೩ ರಂದು ನಡೆಯಲಿರುವ ಸರ್ವ ಸದಸ್ಯರ ಸಭೆಯಲ್ಲಿ ಮೆಜಾರಿಟಿ ತಿಕ್ಕಾಟಕ್ಕೆ ಟ್ವಿಸ್ಟ್ ಪಡೆದುಕೊಳ್ಳುವ ಸಾಧ್ಯತೆ ಇದ್ದು, ಸಭೆಯಲ್ಲಿ ೨/೩ ಮೆಜಾರಿಟಿಯನ್ನು ಆಡಳಿತ ಮಂಡಳಿ ತೋರಿಸಿ ಕ್ಷೇತ್ರ ವಿಂಗಡಣೆಗೆ ಮಂಗಳ ಹಾಡಬೇಕಾಗಿದೆ.

ಈಗಾಗಲೇ ಕೋಚಿಮುಲ್ ಕ್ಷೇತ್ರ ವಿಂಗಡೆಯನ್ನು ಮಾಡಿದ್ದು, ಕಾಂಗ್ರೇಸ್‌ನ ಕೆಲ ಶಾಸಕರು ತಾಳಕ್ಕೆ ಕುಣಿದು ಅಧಿಕಾರಿಗಳು ತಮ್ಮ ಇಷ್ಟದಂತೆ ಹಾಗೂ ಕಾಂಗ್ರೇಸ್ ಶಾಸಕರು ಹೇಳಿದಂತೆ ಕ್ಷೇತ್ರ ವಿಂಗಡಣೆ ಮಾಡಿದ್ದಾರೆ ಎಂದು ಕೋಚಿಮುಲ್‌ನ ಕೆಲ ಮಾಜಿ ನಿರ್ದೇಶಕರು ಹಾಗೂ ಬಂಗಾರಪೇಟೆಯ ಕಾಂಗ್ರೇಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರೋಪಿಸಿದರು.

ರಾಮರೆಡ್ಡಿ ಎಂಬುವವರು ಹೈಕೋರ್ಟ್ಗೆ ಕ್ಷೇತ್ರ ವಿಂಗಡಣೆ ವಿರುದ್ಧ ಮೊರೆ ಹೋಗಿದ್ದರು. ಅದನ್ನು ಪರಿಷ್ಕರಿಸಿದ ನ್ಯಾಯಾಲವು ಸರ್ವ ಸದಸ್ಯರ ಸಭೆ ಕರೆದು ಅಲ್ಲಿ ಕ್ಷೇತ್ರ ವಿಂಗಡೆಣೆಯನ್ನು ಮರು ವಿಂಗಡಣೆ ಮಾಡುವಂತೆ ಸೂಚಿಸಿತ್ತು.

ಕೋಚಿಮುಲ್ ಆಡಳಿತ ಅಧಿಕಾರಿ ಹಾಗೂ ಕೋಲಾರ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ರವರು ಮಾ.೧೩ ರಂದು ಸರ್ವಸದಸ್ಯರ ಸಭೆಯ ದಿನಾಂಕವನ್ನು ನಿಗಧಿಪಡಿಸಿದ್ದಾರೆ. ಸದರಿ ಸಭೆಗೆ ಆಯಾ ಹಾಲು ಡೈರಿಗಳ ಅಧ್ಯಕ್ಷರು ಮಾತ್ರವೇ ಭಾಗವಹಿಸಬೇಕು. ಡೆಲಿಗೇಟ್‌ಸ್ ಪಡೆದುಕೊಂಡವರಿಗೆ ಅವಕಾಶವಿಲ್ಲವೆಂದು ಕಟ್ಟಪ್ಪಣೆ ಮಾಡಲಾಗಿತ್ತು.

ಇದರ ವಿರುದ್ಧ ಕೋಲಾರ ತಾಲ್ಲೂಕು ಕಾಮಧೇನಹಳ್ಳಿ ಹಾಲು ಉತ್ಪನ್ನಗಳ ಸಹಕಾರ ಸಂಘದ ಅಧ್ಯಕ್ಷ ಹರೀಶ್ ನ್ಯಾಯಾಲಯಕ್ಕೆ ಮೊರೆ ಹೋಗಿ ಸರ್ವ ಸದಸ್ಯರ ಸಭೆಗೆ ಅಧ್ಯಕ್ಷರು ಮಾತ್ರ ಬರಬೇಕು ಎಂದು ನಿರ್ಭಂಧ ವಿಧಿಸುವ ಮೂಲಕ ಸಹಕಾರ ಕಾಯ್ದೆ ಹಾಗೂ ಕೋಚಿಮುಲ್ ಬೈಲಾ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.

ಕೋಚಿಮುಲ್‌ನಿಂದ ಕಳುಹಿಸಿರುವ ಅಜೆಂಡಾ ಜೊತೆಗೆ ಡೆಲಿಗೇಟೀಸ್ ಫಾರಂ ಸಹ ರವಾನಿಸಲಾಗಿದೆ. ಆದರೆ ಅಧ್ಯಕ್ಷರು ಮಾತ್ರ ಭಾಗವಹಿಸಲು ಅರ್ಹರು ಎಂದು ಸೂಚನೆ ನೀಡಿರುವುದು ತಪ್ಪು ಎಂದು ಕಾಮಧೇನಹಳ್ಳಿ ಡೈರಿ ಪರ ವಕೀಲ ಹನುಮಂತರಾಜು ವಾದಿಸಿದ್ದರು.

ಹಾಲು ಸಹಕಾರ ಸಂಘವನ್ನು ಅದರ ಅಧ್ಯಕ್ಷರೇ ಪ್ರತಿನಿಧಿಸುವ ಕಾರಣ ಅವರೇ ಭಾಗವಹಿಸುವಂತೆ ತಿಳಿಸಲಾಗಿದೆ. ವಿನಾಕಾರಣ ದೋಷ ಹುಡುಕಲಾಗುತ್ತಿದೆ ಎಂದು ಕೋಚಿಮುಲ್ ಪರ ವಕೀಲ ರವಿಶಂಕರ್ ವಾದಿಸಿದರು.

ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಎರಡೂ ಕಡೆಯ ಅಹವಾಲನ್ನು ಆಲಿಸಿ ಮಾ.೧೩ ರಂದು ಕರೆದಿರುವ ಸರ್ವಸದಸ್ಯರ ಸಭೆಗೆ ಅಧ್ಯಕ್ಷರು ಅಥವಾ ಸೊಸೈಟಿ ಆಡಳಿತ ಮಂಡಳಿಯಿAದ ನಿಯೋಜಿಸಲ್ಪಟ್ಟಿರುವ ಡೆಲಿಗೇಟೀಸ್ ಪೈಕಿ ಯಾರಾದರೂ ಭಾಗವಹಿಸಲು ಅವಕಾಶ ನೀಡಬೇಕೆಂದು ಆದೇಶಿಸಿದ್ದಾರೆ.

ಇದರಿಂದಾಗಿ ಕೋಚಿಮುಲ್ ಆಡಳಿತ ಮಂಡಳಿ ಸೊಸೈಟಿ ಆಧ್ಯಕ್ಷರು ಮಾತ್ರ ಭಾಗವಹಿಸಬೇಕೆಂಬ ಆದೇಶಕ್ಕೆ ಹಿನ್ನಡೆ ಉಂಟಾಗಿದೆ. ಈಗ ಡೆಲಿಗೇಟೀಸ್ ಅಥವಾ ಅಧ್ಯಕ್ಷರು ಯಾರಾದರೂ ಒಬ್ಬರು ಭಾಗವಹಿಸುವಂತಾಗಿದೆ.

ಸರ್ವಸದಸ್ಯರ ಸಭೆಯಲ್ಲಿ ೩ನೇ ೨ರಷ್ಟು ಬಹುಮತವನ್ನು ಪಡೆಯಲು ಎರಡೂ ಕಡೆಯಿಂದ ಹಣಾಹಣಿ ಏರ್ಪಡುವ ಸಾಧ್ಯತೆ ಇದೆ. ಈಗಾಗಲೇ ಕೆಲವು ತಾಲ್ಲೂಕುಗಳಲ್ಲಿ ಸರ್ವಸದಸ್ಯರ ಸಭೆಯನ್ನು ಈಗಾಗಲೇ ಆಡಳಿತ ಮಂಡಳಿ ಕ್ಷೇತ್ರ ವಿಂಗಡಣೆ ಮಾಡಿರುವುದು ಸರಿ ಇದೆ ಎಂದು ತಿಳಿಸುವಂತೆ ಆಯಾ ತಾಲ್ಲೂಕುಗಳ ಶಾಸಕರು ಸಭೆಯಲ್ಲಿ ಭಾಗವಹಿಸುವ ಅಧ್ಯಕ್ಷರು ಅಥವಾ ಡೆಲಿಗೇಟೀಸ್‌ಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಕ್ಷೇತ್ರ ವಿಂಗಡಣೆ ವಿರೋಧಿಸುವವರೂ ಹಾಗೂ ಕಾಂಗ್ರೇಸ್‌ನ ಒಂದು ಗುಂಪು ಕ್ಷೇತ್ರ ವಿಂಗಡಣೆಯನ್ನು ವಿರೋಧಿಸುವವರು ಸೇರಿ ಸರ್ವ ಸದಸ್ಯರ ಸಭೆಯಲ್ಲಿ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿವೆ.

ಚಿತ್ರ ೦೯ ಕೆ.ಎಲ್.ಆರ್. ೦೨ : ಕೋಚಿಮುಲ್ ಆಡಳಿತಮಂಡಳಿಯ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net