ಮಹಿಳೆಯರು ಕೃಷಿ ಚಟುವಟಿಕೆಯಲ್ಲಿ ತೊಡಗಲಿ

2-MDG-1P1 TRAINIG
ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿಸಖಿ ಸಾಮರ್ಥ್ಯ ಅಭಿವೃದ್ಧಿ ತರಬೇತಿಯಲ್ಲಿ ಭಾಗವಹಿಸಿದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಡಾ. ಎ.ಟಿ.ಕೃಷ್ಣಮೂರ್ತಿ, ಎಂ.ಜೆ.ಚಂದ್ರೇಗೌಡ, ಸ್ನೇಹಾ ಸೀಗೆಹಳ್ಳಿ, ಡಾ. ಎಚ್.ಟಿ.ಮೋಹನ್‌ಕುಮಾರ್, ಸಿ.ಕೆ.ಪ್ರಮೀಳಾ, ಎಚ್.ಕೆ.ಪೂರ್ಣೇಶ್, ಎಂ.ಎಚ್.ಸುಚಿತ್ರಾಕುಮಾರಿ ಇತರರಿದ್ದರು.
Published on

ಮೂಡಿಗೆರೆ: ಮಹಿಳೆಯರು ಕೃಷಿ ಚಟುವಟಿಕೆಯಲ್ಲಿ ತೊಡಗಿದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು. ಗ್ರಾಮೀಣ ಭಾಗದಲ್ಲಿ ಇಂತಹ ಅವಕಾಶ ಕಳೆದುಕೊಳ್ಳಬಾರದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕೃಷಿಸಖಿ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕುಟುಂಬದ ಪುರುಷರೊಂದಿಗೆ ದುಡಿಯುವ ಮಹಿಳೆಯರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಕೃಷಿಸಖಿ ಸಾಮರ್ಥ್ಯ ಅಭಿವೃದ್ಧಿ ತರಬೇತಿಯಲ್ಲಿ ಪಡೆದ ಕೌಶಲಗಳನ್ನು ಮಹಿಳೆಯರು ಕಾಯಕದಲ್ಲಿ ಅಳವಡಿಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು.

ಬೆಂಗಳೂರಿನ ಐಸಿಎಆರ್ ನೋಡಲ್ ಅಧಿಕಾರಿ ಎಂ.ಜೆ.ಚಂದ್ರೇಗೌಡ ಮಾತನಾಡಿ, ವಿವಿಧ ಇಲಾಖೆಗಳಲ್ಲಿ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ಅಧಿಕಾರಿಗಳಿಂದ ಕೃಷಿಸಖಿಯರು ಮಾಹಿತಿ ಪಡೆದು ರೈತರಿಗೆ ತಲುಪಿಸಬೇಕು. ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ರೈತರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಿದರೆ ವರ್ಷಪೂರ್ತಿ ಜಮೀನಿನಲ್ಲಿ ದುಡಿಯುವ ರೈತರಿಗೆ ನೆರವು ನೀಡಿದಂತಾಗುತ್ತದೆ. ಜಮೀನಿನಲ್ಲಿ ಕಷ್ಟಪಟ್ಟು ಬೆಳೆದಿರುವ ಬೆಳೆಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ರೈತರು ನಷ್ಟ ಮಾಡಿಕೊಳ್ಳದಂತೆ ಕೃಷಿ ಸಖಿಯರು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಮಣ್ಣು ವಿಜ್ಞಾನ, ಮಣ್ಣಿನ ಆರೋಗ್ಯ, ಮಣ್ಣಿನ ಮಾದರಿ ತೆಗೆಯುವ ಕ್ರಮ, ಕೃಷಿ ಬೆಳೆಗಳು ಹಾಗೂ ತೋಟಗಾರಿಕೆ ಬೆಳೆಗಳ ಬೇಸಾಯ ಕ್ರಮ, ಆಧುನಿಕ ತಂತ್ರಜ್ಞಾನ, ಅಣಬೆ ಬೇಸಾಯ ಮುಂತಾದ ವಿಷಯಗಳ ಕುರಿತು ಕೆವಿಕೆ ಗೃಹ ವಿಜ್ಞಾನಿ ಡಾ. ಸ್ನೇಹಾ ಸೀಗೆಹಳ್ಳಿ ತರಬೇತಿ ನೀಡಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಎಚ್.ಟಿ.ಮೋಹನ್‌ಕುಮಾರ್, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕಿ ಸಿ.ಕೆ.ಪ್ರಮೀಳಾ, ರೈತ ಉತ್ಪಾದಕರ ಸಂಘದ ಅಧ್ಯಕ್ಷ ಎಚ್.ಕೆ.ಪೂರ್ಣೇಶ್, ಸಸ್ಯ ಸಂರಕ್ಷಣೆ ವಿಭಾಗದ ವಿಜ್ಞಾನಿ ಡಾ. ಎಂ.ಎಚ್.ಸುಚಿತ್ರಾಕುಮಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net