ಮಹಿಳೆಯರಿಗೆ ಮತದಾನದ ಹಕ್ಕು

nrp nataraj
ಎನ್.ಆರ್.ಪುರ ತಾಲೂಕಿನ ಚೌಡಿಗದ್ದೆಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್ ನಟರಾಜ್ ಮಾತನಾಡಿದರು. ಇ.ಎಸ್.ಪ್ರವೀಣ್, ಕಾರ್ತಿಕ್ ಕಾರ್ಗದ್ದೆ, ಶ್ರೀಜಿತ್ ಗೌಡ, ಎಲ್ದೋ, ರತನ್‌ಗೌಡ ಅರಗಿ ಇತರರಿದ್ದರು.
Published on

ಎನ್.ಆರ್.ಪುರ: ಡಾ. ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಮಹಿಳೆಯರಿಗೆ ಮತದಾನದ ಹಕ್ಕು ದೊರಕಿದೆ ಎಂದು ಲೇಖಕ ಹೊನ್ನೇಕೊಡಿಗೆ ಎಲ್ದೋ ತಿಳಿಸಿದರು.

ಆಡುವಳ್ಳಿ ಗ್ರಾಮದ ಚೌಡಿಗದ್ದೆಯಲ್ಲಿ ಬಾಳೆಹೊನ್ನೂರು ಯುವ ಕಾಂಗ್ರೆಸ್ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಜೀವನ, ಸಾಧನೆ, ಕೊಡುಗೆ ಕುರಿತು ಮಾತನಾಡಿ, ಅಂಬೇಡ್ಕರ್ ಸ್ವಾತಂತ್ರೃಪೂರ್ವದಲ್ಲಿ ಶೋಷಿತ ಸಮಾಜಕ್ಕೆ ಮೀಸಲಾತಿಯ ಅವಶ್ಯಕತೆ ಬಗ್ಗೆ ಪ್ರತಿಪಾದಿಸುತ್ತಿದ್ದರು. ತಳ ಸಮುದಾಯಗಳು ಮೀಸಲಾತಿ ಪಡೆದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು ಎಂಬುದು ಅವರ ಕನಸಾಗಿತ್ತು. ಗೌತಮ ಬುದ್ಧನನ್ನು ಗುರು ಎಂದೇ ಪರಿಗಣಿಸಿದ್ದರು. ಹೀಗಾಗಿ ಅಹಿಂಸೆ, ಶಾಂತಿ, ಕರುಣೆ, ದಯೆ, ಸ್ವಾಂತಂತ್ರೃ, ಸಮಾನತೆ, ಭ್ರಾತೃತ್ವದ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಕಾರ್ತಿಕ್ ಕಾರ್ಗದ್ದೆ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನದಿಂದ ದಲಿತರು, ಹಿಂದಳಿದ ವರ್ಗದವರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಯಿತು ಎಂದರು.

ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲು ನಟರಾಜ ಮಾತನಾಡಿ, ದೇಶದಲ್ಲಿ ಎಲ್ಲ ಧರ್ಮ, ಜಾತಿಗಳು ಒಟ್ಟಾಗಿ ಬಾಳಲು ಅಂಬೇಡ್ಕರ್ ಬರೆದ ಸಂವಿಧಾನವೇ ಕಾರಣ ಎಂದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್‌ಗೌಡ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯ 12 ಬ್ಲಾಕ್ ಯುವ ಕಾಂಗ್ರೆಸ್‌ನಿಂದ ಏಪ್ರಿಲ್ ಪೂರ್ಣ ಜಿಲ್ಲೆಯ ವಿವಿಧ ಕಡೆ ಅಂಬೇಡ್ಕರ್ ಜಯಂತಿ ಆಚರಿಸಲಾಗುವುದು ಎಂದರು.

ಬ್ಲಾಕ್ ಯುವ ಕಾಂಗ್ರೆಸ್ ಹಾಗೂ ಚೌಡಿಗದ್ದೆ ಗ್ರಾಮಸ್ಥರು ಸಂಯುಕ್ತವಾಗಿ ಜೈ ಭೀಮ್ ಕಾರ್ಯಕ್ರಮ ನಡೆಸಿದರು. ಗ್ರಾಮದ ವಿದ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕ ಮತ್ತು ಸಂವಿಧಾನದ ಪುಸ್ತಕವನ್ನು ವಿತರಿಸಲಾಯಿತು.

ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರತನ್‌ಗೌಡ ಅರಗಿ, ಯುವ ಕಾಂಗ್ರೆಸ್ ಶೃಂಗೇರಿ ಕ್ಷೇತ್ರ ಅಧ್ಯಕ್ಷ ದುರ್ಗಾ ಚರಣ್, ಜಿಲ್ಲಾ ಯವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮಂಜೇಶ್, ಅಭಿಲಾಶ್, ಕೌಶಿಕ್ ಪಟೇಲ್, ತಹೀಬ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸಂದೀಪ್, ಕೆಡಿಪಿ ಸದಸ್ಯ ಜಿ.ಎಸ್.ಪ್ರವೀಣ್, ಗ್ರಾಪಂ ಸದಸ್ಯರಾದ ವಿಜಯ, ರಾಜೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net