

ಕೆ.ಆರ್.ನಗರ: ಗಾಂಧೀಜಿ ಸೇರಿದಂತೆ ಅನೇಕ ಮಹಾನೀಯರ ತ್ಯಾಗ ಬಲಿದಾನದಿಂದ ದೊರೆತ ಸ್ವಾತಂತ್ರ್ಯವನ್ನು ಉಳಿಸಿಕೊಂಡು ನಾವು ಅವರಂತೆ ದೇಶಕ್ಕೆ, ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಡಾ.ರಾಜ್‌ಕುಮಾರ್ ಬಾನಾಂಗಳದಲ್ಲಿ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಆಯೋಜಿಸಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಹಾತ್ಮಗಾಂಧೀಜಿಯವರು ಮಧ್ಯರಾತ್ರಿಯಲ್ಲಿ ಮಹಿಳೆ ಯಾವುದೇ ತೊಂದರೆ ಇಲ್ಲದಂತೆ ಓಡಾಡಿದಾಗ ಮಾತ್ರ ದೇಶ ಸಂಪೂರ್ಣ ಸ್ವಾತಂತ್ರ್ಯ ಕಾಣಲಿದೆ ಎಂದು ಹೇಳಿದ್ದರು. ಆದ್ದರಿಂದ ಪ್ರತಿಯೊಬ್ಬರು ಮಹಿಳೆಯರಿಗೆ ಗೌರವ ಕೊಡುವುದನ್ನು ರೂಢಿಸಿಕೊಳ್ಳಿ ಎಂದು ಮನವಿ ಮಾಡಿದರು.
ಸರ್ಕಾರ ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದು ಮಹಿಳೆಯರಿಗೆ ವಿಶೇಷ ಗೌರವ ನೀಡಿದೆ. ಇದರ ಜತೆಗೆ ರಾಜಕೀಯ ಸ್ಥಾನ ಮಾನಗಳನ್ನು ನೀಡಲಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸಂಗೊಳ್ಳಿ ರಾಯಣ್ಣ ಅವರ ಜಯಂತಿಯನ್ನು ಕೂಡ ಇಂದೇ ಆಚರಿಸಲಾಗುತ್ತಿದ್ದು, ರಾಯಣ್ಣರಂತಹ ಹೋರಾಟದ ಮನೋಭಾವನೆಯನ್ನು ವಿದ್ಯಾರ್ಥಿಗಳು ಮತ್ತು ಯುವಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ವಿಧಾನಪರಿಷತ್ ಮಾಜಿ ಸದಸ್ಯ ಟಿ.ಕೆ.ಚಿನ್ನಸ್ವಾಮಿ, ಜಿಪಂ ಮಾಜಿ ಸದಸ್ಯ ಜಯರಾಮೇಗೌಡ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಮಿಕ್ಸರ್‌ಶಂಕರ್, ಸದಸ್ಯರಾದ ಕೋಳಿಪ್ರಕಾಶ್, ನಟರಾಜ್, ಶಂಕರ್‌ಸ್ವಾಮಿ, ಶಿವುನಾಯಕ್, ಮಾಜಿ ಸದಸ್ಯ ಕೆ.ವಿನಯ್, ಮುಖ್ಯಾಧಿಕಾರಿ ಸುಧಾರಾಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರಾಧ್ಯಕ್ಷ ಎಂ.ಜೆ.ರಮೇಶ್, ಇಒ ಎಚ್.ಕೆ.ಸತೀಶ್, ಬಿಇಒ ಆರ್.ಕೃಷ್ಣಪ್ಪ, ಟಿಎಸ್‌ಡಬ್ಲ್ಯೂ ಎಸ್.ಎಂ.ಅಶೋಕ್‌ಕುಮಾರ್, ಟಿಎಚ್‌ಒ ಡಾ.ಕೆ.ಆರ್.ಮಹೇಂದ್ರಪ್ಪ, ಬಿಸಿಎಂ ಅಧಿಕಾರಿ ಚಂದ್ರಕಲಾ, ಇಸಿಒ ದಾಸಪ್ಪ, ಸಿಆರ್‌ಪಿ ವಸಂತಕುಮಾರ್ ಇನ್ನಿತರರು ಹಾಜರಿದ್ದರು.