ಮಹಿಳೆಯರಿಗೆ ಆರೋಗ್ಯ ಅರಿವು ಮುಖ್ಯ

16 TKE 1(SIMANTHA) (1)
ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಗ್ರಾಮದ ಗಣಪತಿ ಪೆಂಡಾಲ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಮಾಡಲಾಯಿತು. ಎನ್.ರಾಮೇಗೌಡ, ವಾಣಿ, ಎನ್.ಚರಣ್‌ರಾಜ್, ಅಲುಮೇಲಮ್ಮ, ಎ.ಕುಮಾರ್, ಪ್ರದೀಪ್, ಜಿ.ಶಿವಪ್ಪ ಇತರರಿದ್ದರು.
Published on

ತರೀಕೆರೆ: ಹೆಣ್ಣು ಮಕ್ಕಳು ಶಿಕ್ಷಿತರಾಗಿ ಶೋಷಣೆ ಮತ್ತು ಸಮಾಜದಲ್ಲಿ ತಾಂಡವವಾಡುತ್ತಿರುವ ಹಲವು ಪಿಡುಗುಗಳನ್ನು ದಮನಗೊಳಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಎನ್.ರಾಮೇಗೌಡ ಹೇಳಿದರು.

ತಾಲೂಕಿನ ಎಂ.ಸಿ.ಹಳ್ಳಿ ಗ್ರಾಮದ ಗಣಪತಿ ಪೆಂಡಾಲ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ, ಶಿಕ್ಷಣ ಇಲಾಖೆ, ಜಿ.ಎಚ್. ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಹಾಗೂ ಗ್ರಾಪಂ ಸಹಯೋಗದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಸೀಮಂತ ಮತ್ತು ಬಾಲ್ಯ ವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರೌಢಾವಸ್ಥೆಯಲ್ಲಿರುವ ಹೆಣ್ಣು ಮಕ್ಕಳಿಗೆ ಆರೋಗ್ಯ ಅರಿವು ಮುಖ್ಯ. ಕೆಲವು ವಿಷಯಗಳ ಸೂಕ್ಷ್ಮತೆ ತಿಳಿದು ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕು. ಕಿರುಕುಳ, ಸಮಸ್ಯೆ ಎದುರಾದ ಸಂದರ್ಭಗಳಲ್ಲಿ ಕಾನೂನಿನ ಸದ್ಬಳಕೆ ಮಾಡಿಕೊಂಡು ಅಪಾಯದಿಂದ ಪಾರಾಗಬೇಕು ಎಂದರು. ಗರ್ಭೀಣಿಯರು ದಿನನಿತ್ಯ ಪೌಷ್ಟಿಕ ಆಹಾರ ಸೇವಿಸಬೇಕು. ಶಾಂತಿ, ನೆಮ್ಮದಿ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಈ ಎಲ್ಲ ಕ್ರಮ ಅನುಸರಿಸಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಬೇಕು ಎಂದರು.

ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ ಮಾತನಾಡಿ, ಗರ್ಭಿಣಿಯರ ಬಯಕೆಗೆ ಬಡತನ ಅಡ್ಡಿಯಾಗಿದೆ. ಇದನ್ನು ಗಮನದಲ್ಲಿಟ್ಟು ಕಳೆದ 12 ವರ್ಷಗಳಿಂದ ಟ್ರಸ್ಟ್ ಮೂಲಕ ಸಾಮೂಹಿಕ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಇದಕ್ಕೆ ಗ್ಯಾರಂಟಿ ಯೋಜನೆ ಸಾಕ್ಷಿ ಎಂದರು.

ಸಿಡಿಪಿಒ ಎನ್.ಚರಣ್‌ರಾಜ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಬಾಲ್ಯ ವಿವಾಹ ಪ್ರಕರಣ ಕಡಿಮೆಯಾಗುತ್ತಿಲ್ಲ. ಗರ್ಭಿಣಿಯರಿಗೆ ಬಯಕೆಗಳು ಸಹಜವಾಗಿರುವುದರಿಂದ ಉತ್ತಮ ಆಹಾರ ಸೇವನೆ ಮಾಡಬೇಕು. ದೈಹಿಕ ಬದಲಾವಣೆಗೆ ಹೊಂದಿಕೊಳ್ಳಬೇಕು ಎಂದು ಹೇಳಿದರು.

ಗ್ರಾಪಂ ಉಪಾಧ್ಯಕ್ಷೆ ಅಲುಮೇಲಮ್ಮ, ಸದಸ್ಯರಾದ ಎ.ಕುಮಾರ್, ಪ್ರದೀಪ್, ರಾಜಪ್ಪ, ಪ್ರೇಮಲತಾ, ಶೋಭಾ, ಮಲ್ಲೇಶಪ್ಪ, ಕೆಡಿಪಿ ಪ್ರಗತಿ ಪರಿಶೀಲನಾ ಸಮಿತಿ ಸದಸ್ಯೆ ಜಿ.ಎಸ್.ರಚನಾ, ಎಸ್‌ಡಿಎಂಸಿ ಅಧ್ಯಕ್ಷ ಎಚ್.ಎಸ್.ಮೊಹಿದ್ದೀನ್, ಪಿಎಸಿಎಸ್ ಉಪಾಧ್ಯಕ್ಷೆ ಬಿ.ಸಿ.ಪೂಜಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಶಿವಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net