

ಹುಣಸೂರು: ಆಧುನಿಕ ಜಗತ್ತಿನ ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಲು ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಅವಶ್ಯಕ ಎಂದು ಚಲನಚಿತ್ರ ನಿರ್ದೇಶಕಿ ಡಿ.ಸುಮನಾ ಕಿತ್ತೂರು ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮತ್ತು ಯೂತ್ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಲಿಕೆಯೇ ಅರಿವಿನ ಗುರುವಾಗಿದ್ದಾರೆ. ವಿದ್ಯಾರ್ಥಿದಿಸೆಯಲ್ಲಿ ವ್ಯಾಸಂಗದೊಂದಿಗೆ ಸಾಮಾಜಿಕ, ರಾಜಕೀಯ ಕ್ಷೇತ್ರಗಳ ಕುರಿತ ಅರಿವು ನಿಮಗಿರಲಿ. ಹೆಣ್ಣಿಗೆ ಈ ಸಮಾಜದಲ್ಲಿ ಇಂದಿಗೂ ಅಡೆತಡೆಗಳಿವೆ ನಿಜ. ಆದರೆ 3 ದಶಕಗಳ ಹಿಂದಿದ್ದ ತೊಂದರೆಗಳು ಈಗಿಲ್ಲ. ಮೊಬೈಲ್ ನಿಮ್ಮ ಆತ್ಮೀಯ ಮಿತ್ರನೂ ಆಗಬಹುದು, ಜೀವ ಹಿಂಡುವ ಶತ್ರುವೂ ಆಗಬಹುದು. ಅದನ್ನು ಬಳಸಿಕೊಳ್ಳುವ ರೀತಿಯನ್ನು ಅವಲಂಬಿಸಿದೆ. ರಾಜಕೀಯ ಕ್ಷೇತ್ರವೆಂದು ಹಿಂದೇಟು ಹಾಕದೆ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಿ. ಹೆಣ್ಣು ಪರಸ್ಪರ ಒತ್ತಾಸೆಯಿಂದ ಒಂದಾಗಿ ನಿಂತರೆ ಆ ಶಕ್ತಿಯನ್ನು ಹಿಮ್ಮೆಟ್ಟಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಅಥ್ಲಿಟ್ ರಿನಾ ಜಾರ್ಜ್ ಮಾತನಾಡಿ, ಮೊದಲು ನಿಮ್ಮನ್ನು ನೀವು ಗುರುತಿಸಿಕೊಳ್ಳಿ. ನಿಮ್ಮ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರಿತುಕೊಳ್ಳಿ. ಅದನ್ನು ಸರಿಪಡಿಸಿಕೊಂಡಲ್ಲಿ ನೀವು ಪ್ರಪಂಚಕ್ಕೆ ತೆರೆದುಕೊಳ್ಳಲು ಸಾಧ್ಯ. ಸಾಧನೆಗೆ ನೂರು ಹಾದಿಗಳಿವೆ. ಸಾಧಿಸುವ ಛಲ ನಿಮ್ಮಲ್ಲಿರಲಿ ಎಂದು ಹುರಿದುಂಬಿಸಿದರು.
ಪ್ರಾಂಶುಪಾಲ ಪುಟ್ಟಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮೋದೂರು ಮಹೇಶಾರಾಧ್ಯ ಮಾತನಾಡಿದರು. ವಿವಿಧ ಸ್ಪರ್ಧೆಗಳು, ಪಂದ್ಯಾವಳಿಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಡಾಕ್ಟರೇಟ್ ಪದವಿ ಗಳಿಸಿದ ಪ್ರಾಧ್ಯಾಪಕರಾದ ಡಾ.ಪ್ರೇಮಲತಾ, ಡಾ.ಶ್ರೀನಿವಾಸ್ ಹಾಗೂ ಎನ್‌ಎಸ್‌ಎಸ್ ಘಟಕಗಳ ಅತ್ಯುತ್ತಮ ಸಂಯೋಜನಾಧಿಕಾರಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎಸ್.ಭಾಸ್ಕರ್ ಅವರನ್ನು ಸನ್ಮಾನಿಸಲಾಯಿತು.
ಸಿಡಿಸಿ ಸದಸ್ಯರಾದ ಜ್ಯೋತಿ ವಿಶ್ವನಾಥ್, ಶಿವನಂಜು, ಶ್ರೀನಾಥ್, ರಾಧಾಕೃಷ್ಣ, ರಾಜಶೇಖರ್, ಶಿವಕುಮಾರ್.ವಿ.ರಾವ್, ಹರ್ಷವರ್ಧನ್, ದಾ.ರಾ.ಮಹೇಶ್, ಪ್ರದೀಪ್, ಅನಂತಮೂರ್ತಿ , ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಯರು ಹಾಜರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.