

ಸಾಲಿಗ್ರಾಮ : ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಮಹಿಳಾ ವಿಶೇಷ ಗ್ರಾಮ ಸಭೆಗಳು ಇನ್ಮುಂದೆ ಮಹಿಳೆಯರ ನೋವು, ನಲಿವಿಗೂ ಸ್ಪಂದಿಸಲಿವೆ ಹಾಗೂ ಕಿಶೋರಿಯರು ತಮ್ಮ ಸಮಸ್ಯೆಗಳನ್ನು ಮನಸಾರೆ ಬಿಚ್ಚಿಟ್ಟು ಪರಿಹಾರ ಕಂಡುಕೊಳ್ಳಲು ಗ್ರಾಮ ಸಭೆಗಳು ವೇದಿಕೆಯಾಗಲಿವೆ ಎಂದು ಸಾಲಿಗ್ರಾಮ ತಾಲೂಕಿನ ಮೇಲೂರು ಗ್ರಾ.ಪಂ. ಅಧ್ಯಕ್ಷೆ ವಿಜಯಾ ಹೇಳಿದರು.
ಸಾಲಿಗ್ರಾಮ ತಾಲೂಕಿನ ಮೇಲೂರು ಗ್ರಾ.ಪಂ.ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಮಹಿಳಾ ಗ್ರಾಮಸಭೆ ಹಾಗೂ ಮಹಿಳೆಯರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿಗಳಲ್ಲಿ ನಡೆಸಲಾಗುತ್ತಿರುವ ಸಾಮಾನ್ಯ ಗ್ರಾಮ ಸಭೆಗಳ ಮಾದರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕವಾಗಿ ವಿಶೇಷ ಗ್ರಾಮ ಸಭೆಗಳನ್ನು ನಡೆಸಲು ಯೋಜಿಸಲಾಗಿದೆ. ಸರ್ಕಾರದಿಂದ ಬಿಡುಗಡೆಯಾಗುವ ಸೌಲಭ್ಯಗಳನ್ನು ಮಹಿಳೆಯರಿಗೆ ತಲುಪಿಸಲು ಹಾಗೂ ನಾನಾ ಅಭಿವೃದ್ಧಿ ಇಲಾಖೆಗಳ ಯೋಜನೆಗಳಿಗೆ ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡಲು ಈ ವಿಶೇಷ ಗ್ರಾಮ ಸಭೆಗಳನ್ನು ನಡೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ. ಪ್ರಸಕ್ತ ವರ್ಷದಿಂದಲೇ ಈ ವಿಶೇಷ ಗ್ರಾಮ ಸಭೆಗಳನ್ನು ನಡೆಸಲು ಕ್ರಮಕೈಗೊಳ್ಳುವಂತೆ ಸೂಚಿಸಿದ್ದು ಈ ಹಿನ್ನೆಲೆಯಲ್ಲಿ ಮಹಿಳಾ ಗ್ರಾಮ ಸಭೆ ಅಯೋಜಿಸಲಾಗಿದೆ ಎಂದರು.
ಮಹಿಳೆಯರಲ್ಲಿ ರಾಜಕೀಯ ನಾಯಕತ್ವ, ಚುನಾಯಿತ ಮಹಿಳಾ ಪ್ರತಿನಿಧಿಗಳ ಸಾಮರ್ಥ್ಯ ಹೆಚ್ಚಿಸುವುದು, ನಾನಾ ಯೋಜನೆಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳಲು ಪ್ರೇರೇಪಿಸುವುದು, ಮಹಿಳಾ ಪ್ರತಿನಿಧಿಗಳಿಗೆ ಸೂಕ್ತ ತಿಳಿವಳಿಕೆ ನೀಡುವುದು ವಿಶೇಷ ಗ್ರಾಮ ಸಭೆಯ ಮೂಲ ಉದ್ದೇಶವಾಗಿದೆ.
ಪಿಡಿಒ ಅನಿತಾ ಮಾತನಾಡಿ, ಮಹಿಳೆಯರು ವಿಶೇಷ ಗ್ರಾಮ ಸಭೆಯಲ್ಲಿ ಮಕ್ಕಳು ಮತ್ತು ಮಹಿಳೆಯರ ಅಪೌಷ್ಟಿಕತೆ, ಆರೋಗ್ಯ, ಕಾನೂನು, ಸಬಲೀಕರಣ ಸೇರಿ ನಾನಾ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಗ್ರಾಮೀಣ ಕಿಶೋರಿಯರು ಹಾಗೂ ಮಹಿಳೆಯರಿಗೆ ಗ್ರಾಮ ಸಭೆಗಳು ಜಾಗೃತಿಯ ತಾಣವಾಗಲಿವೆ. ತಾಯಂದಿರ ಮರಣ, ಶಿಶು ಮರಣ ಪ್ರಮಾಣ ತಗ್ಗಿಸಲು ಯೋಜನೆ, ಬಾಣಂತಿಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಎಲ್ಲ ಸೇವೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಸೂಚಿಸುವುದೂ ಗ್ರಾಮ ಸಭೆಯ ಆದ್ಯತೆಗಳಾಗಿವೆ ಎಂದರು..
ಸಭೆಯಲ್ಲಿ ಉಪಾಧ್ಯಕ್ಷೆ ನೀಲಾವತಿ, ಸದಸ್ಯರಾದ ಮಧು, ಸಂತೋಷ್, ಕಾರ್ಯದರ್ಶಿ ಚಲುವೇಗೌಡ, ಸಿಬ್ಬಂದಿ ಪ್ರಸನ್ನ ಹಾಗೂ ಸ್ವಸಹಾಯ ಸಂಘದ ಮಹಿಳಾ ಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.