ವಿಟ್ಲದಲ್ಲಿ ದರೋಡೆಗೆ ವಿಫಲ ಯತ್ನ

Published on

ವಿಟ್ಲ: ಇಲ್ಲಿನ ಮೇಗಿನ ಪೇಟೆಯಲ್ಲಿ ಒಂಟಿ ಮಹಿಳೆ ವಾಸವಿದ್ದ ಮನೆಗೆ ಶುಕ್ರವಾರ ಬೆಳಗ್ಗೆ ನುಗ್ಗಿದ ಆಗಂತುಕನೋರ್ವ ದರೋಡೆಗೆ ವಿಫಲ ಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ.

ಮೇಗಿನಪೇಟೆ ನಿವಾಸಿ ಲಲಿತಾ(45)ದಾಳಿಯಿಂದ ಗಾಯಗೊಂಡವರು. ಶುಕ್ರವಾರ ಬೆಳಗ್ಗೆ 7.45ರ ಸುಮಾರಿಗೆ ದೇವರ ಮನೆಯಲ್ಲಿ ದೀಪ ಇಡುತ್ತಿದ್ದ ಸಂದರ್ಭ ಮನೆಯೊಳಗೆ ನುಗ್ಗಿದ ವ್ಯಕ್ತಿ ಲಲಿತಾ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಅಡುಗೆ ಮನೆಗೆ ಎಳೆದೊಯ್ದು ಬಾಯಿಗೆ ಬಟ್ಟೆ ತುರುಕಿ, ಕೈ ಕಾಲು ಕಟ್ಟಿ ಹಾಕಿ, ಮನೆ ಮುಂಭಾಗದ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದಾನೆ.

ಬೆಳಗ್ಗೆ ಧಾರಾಕಾರ ಮಳೆ ಸುರಿಯುತ್ತಿದ್ದ ಪರಿಣಾಮ ಘಟನೆ ಅಕ್ಕಪಕ್ಕದ ಮನೆಯವರ ಗಮನಕ್ಕೆ ಬಂದಿರಲಿಲ್ಲ.ಕೆಲ ಹೊತ್ತಿನ ಬಳಿಕ ಹಿಂಬಾಗಿಲ ಮೂಲಕ ಕೈಗೆ ವೈರ್ ಸುತ್ತಿಸಿಕೊಂಡು, ಮುಖದಿಂದ ರಕ್ತ ಬರುತ್ತಿದ್ದ ಸ್ಥಿತಿಯಲ್ಲಿ ಬೊಬ್ಬೆ ಹೊಡೆಯುತ್ತಾ ಮಹಿಳೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ತಕ್ಷಣವೇ ಮಹಿಳೆಯನ್ನು ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಮುಖಕ್ಕೆ ಮತ್ತು ಎದೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ ನಾಗರಾಜ್, ಬಂಟ್ವಾಳ ಸಂಚಾರ ಠಾಣೆಯ ಉಪನಿರೀಕ್ಷಕ ರಾಜೇಶ್ ಕೆ.ವಿ ಭೇಟಿ ಪರಿಶೀಲನೆ ನಡೆಸಿದರು. ವಿಟ್ಲ ಠಾಣೆಯ ಉಪನಿರೀಕ್ಷಕ ವಿನೋದ್ ಕೆ. ಎಸ್. ಅವರ ತಂಡ ತನಿಖೆ ನಡೆಸುತ್ತಿದ್ದಾರೆ.ವಿಟ್ಲ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಯತ್ನ ಪ್ರಕರಣ ದಾಖಲಾಗಿದೆ.

ಶಂಕಿತ ವ್ಯಕ್ತಿ ಬಗ್ಗೆ ದೂರು!
ಭಾನುವಾರ ರಾತ್ರಿ ಇದೇ ಮನೆಗೆ ಆಗಮಿಸಿದ್ದ ವ್ಯಕ್ತಿ ಹಿಂದಿಯಲ್ಲಿ ನೀರು ಕೇಳಿದ್ದ. ಬಳಿಕ ಅದೇ ರಾತ್ರಿ ಮನೆಯ ಬಾಗಿಲು ಬಡಿದ ಶಬ್ಧವಾಗಿತ್ತು. ಇದರಿಂದ ಭಯಗೊಂಡಿದ್ದ ಮಹಿಳೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಆಗಮಿಸಿದ್ದರೂ, ಯಾರೊಬ್ಬರೂ ಪತ್ತೆಯಾಗಿರಲಿಲ್ಲ.

ಚಿನ್ನ ಮುಟ್ಟದ ಆಗಂತುಕ:
ಮನೆಯ ಕಪಾಟಿನಲ್ಲಿ ಬಂಗಾರ ಇತ್ತಾದರೂ, ಕಪಾಟನ್ನು ಒಡೆಯುವ ಸಾಹಸಕ್ಕೆ ಆಗಂತುಕ ಕೈಹಾಕಿಲ್ಲ. ಕಿವಿಯಲ್ಲಿದ್ದ ಒಂದು ಓಲೆ ನಾಪತ್ತೆಯಾಗಿದ್ದರೂ, ಮನೆಯನ್ನು ಶೋಧಿಸುವ ವೇಳೆ ಅದು ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net