

ಶಿವಮೊಗ್ಗ: ಮಹಿಳೆಯರ ಸಂಕಲ್ಪ ಶಕ್ತಿ ಅದ್ಭುತವಾದುದು. ಅವರಿಗೆ ಯಾವ ಕೆಲಸವನ್ನೇ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಯೋಜನೆಯಡಿ ಶಿಕಾರಿಪುರದ ಉಪ್ಪಾರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಮತ್ತು ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿಸಮನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಪಂನಿಂದ ಹಿಡಿದು ದೇಶದ ಪ್ರಥಮ ಪ್ರಜೆಯವರೆಗೆ ಅವರ ಯಶಸ್ಸಿನ ಪಯಣ ಸಾಗಿದೆ. ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಮೊದಲ ಆದ್ಯತೆ ನೀಡಿದೆ. ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಸಾಕ್ಷರ ಕುಟುಂಬವಾಗುತ್ತದೆ. ಅವಳು ಮಕ್ಕಳಿಗೆ ಈ ಮಣ್ಣಿನ ಸಂಸ್ಕೃತಿ, ಸಂಸ್ಕಾರ ಪರಂಪರೆ, ಆಚಾರ-ವಿಚಾರಗಳನ್ನು ಪರಿಚಯಿಸುತ್ತಾಳೆ ಎಂದರು.
ಡಾ. ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿ ಮತ್ತು ಸಾಮಾಜಿಕ ಕಳಕಳಿಯ ಫಲವಾಗಿ ಗ್ರಾಮಾಭಿವೃದ್ಧ್ದಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಸಾವಿರಾರು ಜನರಿಗೆ ಅನುಕೂಲವಾಗಿದೆ. ಮಹಿಳೆಯರು ಆರ್ಥಿಕವಾಗಿ ಸದೃಢರಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ಈ ಯೋಜನೆಯು ಕೃಷಿ, ಶಿಕ್ಷಣ, ಪರಿಸರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯಶಸ್ಸು ಕಂಡಿದೆ ಎಂದು ಹೇಳಿದರು. ಪುರಸಭೆ ಅಧ್ಯಕ್ಷೆ ಶೈಲಾ ಯೋಗೀಶ್ ಮಡ್ಡಿ, ಶಾರದಾ ಶಿರಸಿ, ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಬಾಬು ನಾಯಕ್, ವೆಂಕಟರಮಣ, ರಾಜೇಶ್ವರಿ, ನಂಜುಂಡಿ ಇತರರಿದ್ದರು.