ಮಹಿಳಾ ಮೀಸಲಾತಿ ಮಸೂದೆ ಮಂಡಿಸಲಿ

h13-pushpa amaranath
Published on

ಹುಬ್ಬಳ್ಳಿ: ವಿಧಾನ ಸಭೆ ಹಾಗೂ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಕೇಂದ್ತ ಸರ್ಕಾರ ಇದೀಗ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಆಗ್ರಹಿಸಿದರು.

ಇಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಅವರದ್ದೇ ಮಾತಿನಲ್ಲಿ ಹೇಳುವುದಾದರೆ ತಾಕತ್ತಿದ್ದರೆ, ಧಮ್ ಇದ್ದರೆ ಬಿಜೆಪಿಯವರು ಇದೇ ಸಂಸತ್ತಿನ ಚಳಿಗಾವದ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಲಿ. ಡಾ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕೆಂದು ಉಲ್ಲೇಖಿಸಿದ್ದರು ಎಂದು ಹೇಳಿದರು.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 40 ರಷ್ಟು ಮೀಸಲಾತಿ ಕಲ್ಪಿಸಿದ್ದರು. ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಈಗಾಗಲೇ 88 ಮಹಿಳೆಯರು ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದು ಕ್ರಾಂತಿಕಾರಿ ಬದಲಾವಣೆ ಎಂದು ನಾವು ಸ್ವಾಗತ ಮಾಡುತ್ತೇವೆ. ಎಲ್ಲ ಮಹಿಳೆಯರಿಗೆ ಟಿಕೆಟ್ ಕೊಡಬೇಕು ಎಂದು ಈಗಾಗಲೇ ಕೆಪಿಸಿಸಿಗೆ ಮನವಿ ಮಾಡಿದ್ದೇವೆ ಎಂದರು.

ಪರಿಶಿಷ್ಟರ ಸಮಾವೇಶ

ಜನೆವರಿ 8ರಂದು ಚಿತ್ರದುರ್ಗದಲ್ಲಿ ಮಾಜಿ ಡಿಸಿಎಂ ಡಾ. ಪರಮೇಶ್ವರ ಅವರ ನೇತೃತ್ವದಲ್ಲಿ ಪರಿಶಿಷ್ಟರ ಸಮಾವೇಶ ಆಯೋಜಿಸಲಾಗಿದೆ. ರಾಜ್ಯದಲ್ಲಿ ಸುಮಾರು 1.60 ಕೋಟಿ ಪರಿಶಿಷ್ಟರಿದ್ದಾರೆ. ಪರಿಶಿಷ್ಟರಲ್ಲಿ 101 ಜಾತಿ-ಉಪ ಜಾತಿಗಳಿವೆ. ಇವರನ್ನು ಒಡೆದು ಆಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ. ಕೆಪಿಸಿಸಿ ವತಿಯಿಂದ ಮಹಿಳಾ ಸಮಾವೇಶ ಸಹ ನಡೆಸಲಿದ್ದೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net