

ಹುಣಸೂರು: ಗ್ರಾಮೀಣ ಭಾಗದ ಗ್ರಂಥಾಲಯಗಳು ಮಹಿಳಾ ಮತ್ತು ಮಕ್ಕಳ ಸ್ನೇಹಿ ಗ್ರಂಥಾಲಯಗಳಾಗಿ ಪರಿವರ್ತಿತವಾಗಬೇಕಿದೆ ಎಂದು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತರಬೇತಿ ಸಂಸ್ಥೆಯ ತರಬೇತಿ ಸಂಯೋಜಕ ರಾಜಾ ಹುಣಸೂರು ಅಭಿಪ್ರಾಯಪಟ್ಟರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ ಮತ್ತು ಸಾರ್ವಜನಿಕ ಗ್ರಂಥಾಲಯದ ಹುಣಸೂರು ಶಾಖೆ ಸಹಯೋಗದಲ್ಲಿ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯ ಮೇಲ್ವಿಚಾರಕರಿಗೆ ಆಯೋಜಿಸಿದ್ದ ಮೂರು ದಿನಗಳ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
ಗ್ರಾಮೀಣ ವ್ಯಾಪ್ತಿಯಲ್ಲಿರುವ ಗ್ರಂಥಾಲಯಗಳು ಗ್ರಂಥಾಲಯ ಇಲಾಖೆಯಿಂದ ಬೇರ್ಪಟ್ಟು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೇರ್ಪಡೆಯಾದ ನಂತರ ಮಹಿಳಾ ಮತ್ತು ಮಕ್ಕಳಸ್ನೇಹಿ ಗ್ರಂಥಾಲಯಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳನ್ನು ಗ್ರಂಥಾಲಯದ ಕಡೆ ಆಕರ್ಷಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳು ಮತ್ತು ಕಾರ್ಯತಂತ್ರ ರೂಪಿಸುವ ಕೌಶಲವನ್ನು ಗ್ರಂಥಾಲಯ ಮೇಲ್ವಿಚಾರಕರಿಗೆ ನೀಡುವ ಉದ್ದೇಶದಿಂದ ಜುಲೈ 17 ರಿಂದ ಜುಲೈ 19 ರವರೆಗೆ ಗ್ರಂಥಾಲಯ ಮೇಲ್ವಿಚಾರಕರುಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಮಕ್ಕಳ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಕೈಗೊಳ್ಳಬೇಕಾದ ಗ್ರಾಮೀಣ ಆಟಗಳು, ಪರಿಣಾಮಕಾರಿಯಾಗಿ ಮಕ್ಕಳನ್ನು ಆಕರ್ಷಿಸಲು ಕೈಗೊಳ್ಳಬೇಕಾದ ಪೂರಕ ಚಟುವಟಿಕೆಗಳು, ನಾಯಕತ್ವ, ಮಾನವ ಸಂಪನ್ಮೂಲ ಸದ್ಬಳಕೆ, ಸಮನ್ವಯತೆ ಕುರಿತಂತೆ ಹಲವು ವಿಷಯಗಳ ಬಗ್ಗೆ ಗ್ರಂಥಾಲಯ ಮೇಲ್ವಿಚಾರಕರು ಹೆಚ್ಚಿನ ಗಮನಹರಿಸಬೇಕೆಂದರು.
ಹುಣಸೂರು ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕ ಸತೀಶ್, ಸೇರಿದಂತೆ ತಾಲೂಕಿನ 30 ಗ್ರಾ.ಪಂ.ಗಳ ಗ್ರಂಥಾಲಯ ಮೇಲ್ವಿಚಾರಕರು ತರಬೇತಿಯಲ್ಲಿ ಭಾಗವಹಿಸಿದ್ದರು.