ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಬೈಕ್ ಚಾಲನೆ ತರಬೇತಿ

17
Published on

ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಮೋಟಾರ್ ಬೈಕ್ ಚಾಲನಾ ತರಬೇತಿ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ದೊರಕಿತು.

ನಗರದ ಜ್ಯೋತಿನಗರದಲ್ಲಿ ಇರುವ ಮಹಿಳಾ ಪೊಲೀಸ್ ತರಬೇತಿ ಶಾಲೆಯ ಆವರಣದಲ್ಲಿ ದಕ್ಷಿಣ ವಲಯ ಡಿಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಬೈಕ್ ಚಾಲನೆಗೆ ಹಸಿರು ನಿಶಾನೆ ತೋರಿಸುವ ಮೂಲಕ ತರಬೇತಿ ಕಾರ್ಯಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕೌಶಲ ಮತ್ತು ಸಾಮರ್ಥ್ಯ ತೋರ್ಪಡಿಸುತ್ತಿದ್ದಾರೆ. ಇದು ಪೊಲೀಸ್ ಇಲಾಖೆಗೆ ಯುವತಿಯರು ಹೆಚ್ಚಾಗಿ ಸೇರ್ಪಡೆಗೊಳ್ಳಲು ಸ್ಫೂರ್ತಿ ಹಾಗೂ ಪ್ರೋತ್ಸಾಹವನ್ನು ನೀಡುತ್ತಿದೆ. ಈಗಂತೂ ಅತ್ಯುನ್ನತ ವಿದ್ಯಾರ್ಹತೆ ಹೊಂದಿರುವ ಯುವತಿಯರು ಪೊಲೀಸ್ ಇಲಾಖೆಗೆ ಸೇರುತ್ತಿರುವುದರಿಂದ ಸಾಮಾಜಿಕ ಬದಲಾವಣೆಯು ಆಗುತ್ತಿದೆ ಎಂದರು.

ಮಹಿಳಾ ಪೊಲೀಸರಿಗೆ ಬೈಕ್ ಚಾಲನಾ ತರಬೇತಿ ನೀಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಶ್ಲಾಘಿಸಿದ ಡಿಐಜಿಪಿ ಅವರು, ಭವಿಷ್ಯದಲ್ಲಿ 4 ಚಕ್ರದ ವಾಹನಗಳಾದ ಕಾರು, ಜೀಪ್‌ಗಳ ಚಾಲನಾ ತರಬೇತಿ ಕೊಡಿಸಬೇಕು. ಇದರಿಂದ ತುರ್ತು ಸಮಯದಲ್ಲಿ ಅವರು ತಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಕೂಲವಾಗುತ್ತದೆ. ವಾಹನ ಚಾಲನೆಯಲ್ಲಿ ನಿಷ್ಣಾತರಾಗುವುದರ ಜತೆಗೆ ಈಜು, ಬೆಟ್ಟ-ಗುಡ್ಡ ಹತ್ತುವುದನ್ನು ಕಲಿತುಕೊಳ್ಳಬೇಕು. ಇವುಗಳು ಅಪಾಯಕ್ಕೆ ಒಳಗಾಗುವ ಜೀವಗಳನ್ನು ರಕ್ಷಣೆ ಮಾಡಲು ಅನುಕೂಲವಾಗುತ್ತವೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲೆ ಎಂ.ಎಸ್.ಗೀತಾ, ಡಿವೈಎಸ್‌ಪಿ ಶಂಕರೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net