

ಮೂಡಿಗೆರೆ: ಜಾವಳಿ ಗ್ರಾಮದ ಹೇಮಾವತಿ ನದಿ ಮೂಲದ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ 1.50 ಲಕ್ಷ ರೂ. ಮೌಲ್ಯದ ಬೆಳ್ಳಿಯ ವಿಗ್ರಹ ಕವಚವನ್ನು ಕೊಡುಗೆಯಾಗಿ ನೀಡಿದ ಜಾವಳಿ ಲಕ್ಷ್ಮಣರಾವ್ ಗುರ್ಜರ್ ಪ್ರೌಢಶಾಲೆ ನಿವೃತ್ತ ಶಿಕ್ಷಕ ಎಂ.ಪಿ.ರವೀಂದ್ರ ಅವರನ್ನು ದೇವಸ್ಥಾನದ ಆಡಳಿತ ಮಂಡಳಿಯಿಂದ ಗೌರವಿಸಲಾಯಿತು.
ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಿ ಬಳಿಕ ಬೆಳ್ಳಿ ವಿಗ್ರಹದ ಕವಚವನ್ನು ಸಮರ್ಪಿಸಿದ ನಂತರ ಎಂ.ಪಿ.ರವೀಂದ್ರ ಮಾತನಾಡಿ, ದೇವಾಲಯಗಳಲ್ಲಿ ದಾನವನ್ನು ಧರ್ಮದ ಕಾರ್ಯವೆಂದು ಪರಿಗಣಿಸಲಾಗುತ್ತದೆ. ಭಗವಂತನಿಗೆ ದಾನ ನೀಡುವುದು ಪುಣ್ಯದ ಕಾರ್ಯ. ಸಂಪಾದಿಸಿದ ಹಣದಲ್ಲಿ ಒಂದು ಭಾಗವನ್ನು ದೇವರಿಗೆ ನೀಡುವ ಮೂಲಕ ಭಗವಂತನಿಗೆ ನಮ್ಮ ಕೃತಜ್ಞತೆ ಸಲ್ಲಿಸಬಹುದು. ದಾನದಿಂದ ಹೃದಯ, ಮನಸ್ಸು ಮತ್ತು ಆತ್ಮ ಶುದ್ಧಗೊಳ್ಳುತ್ತದೆ. ಮಲೆನಾಡಿನ ಸೌಂದರ್ಯದ ಮಡಿಲಿನಲ್ಲಿ ಹೇಮಾವತಿ ನದಿ ಮೂಲವೂ ಒಂದಾಗಿದೆ. ನದಿ ಮೂಲದಲ್ಲಿರುವ ಶ್ರೀ ಮಹಾ ಗಣಪತಿ ದೇವಸ್ಥಾನ ಕೂಡ ನೋಡುಗರ ಕಣ್ಮನ ಸೆಳೆಯುವಂತಿದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯೆ ನಂದಿನಿ, ದೇವಸ್ಥಾನ ಸಮಿತಿ ಕಾರ್ಯದರ್ಶಿ ಜಗದೀಶ್ ಗೌಡ, ಪರೀಕ್ಷಿತ್ ಜಾವಳಿ, ಚನ್ನಕೇಶವ ಗೌಡ, ರಮ್ಯಾ, ಮಂಜು, ಸತೀಶ್, ಎಂ.ಆರ್.ಉಮೇಶ್, ಸಂಜೀವ್ ಕೋಟ್ಯಾನ್, ಬಿ.ಕೆ.ರವಿ, ಸಂಪತ್, ಯಮುನಮ್ಮ, ಸುರೇಶ್ ಆಚಾರ್ಯ, ಎಂ.ಪಿ.ನಾರಾಯಣ ಗೌಡ ಇತರರಿದ್ದರು.